Spiritual: ಶ್ರೀ ಕ್ಷೇತ್ರ ಕೇದಾರನಾಥದ ಬಗ್ಗೆ ನಿಮಗೆ ತಿಳಿದಿರಬೇಕಾದ ಅದ್ಭುತ ಸತ್ಯಗಳು..

Spiritual: ಕೆಲ ದಿನಗಳ ಹಿಂದೆ ಕೇದಾರನಾಥ ಧಾಮದ ಬಾಗಿಲು ತೆರೆದಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಕೇದಾರನಾಥನ ದರ್ಶನಕ್ಕಾಗಿ ಬರುತ್ತಿದ್ದಾರೆ. ಆದರೆ ಹಲವರಿಗೆ ಕೇದಾರನಾಥ ಕ್ಷೇತ್ರದ ಕೆಲ ವಿಷಯಗಳ ಬಗ್ಗೆ ಇನ್ನೂ ಅರಿವಿಲ್ಲ. ಹಾಗಾಗಿ ನಾವಿಂದು ಕೇದಾರನಾಥ ಕ್ಷೇತ್ರದ ಬಗ್ಗೆ ಕೆಲ ಸಂಗತಿಗಳನ್ನು ಹೇಳಲಿದ್ದೇವೆ. ಅದನ್ನು ತಿಳಿದು ಕೇದಾರನಾಥನ ದರ್ಶನಕ್ಕೆ ಹೋಗುವುದು ಉತ್ತಮ.

ಉತ್ತರಾಖಂಡದ ರುದ್ರಪ್ರಯಾಗ ಜಿಲ್ಲೆಯ ಮಂದಾಕಿನಿ ನದಿಯ ದಡದಲ್ಲಿ ಕೇದಾರನಾಥ ದೇವಾಲಯವಿದೆ. ಶಿವನ 12 ಜ್ಯೋತಿರ್ಲಿಂಗಗಳಲ್ಲಿ 1 ಆದ ಕೇದಾರನಾಥ ದೇವಸ್ಥಾನದ ಬಾಗಿಲನ್ನು ಕೇವಲ 6 ತಿಂಗಳು ಮಾತ್ರ ತೆರೆದಿಡಲಾಗುತ್ತದೆ. ಉಳಿದ  6 ತಿಂಗಳು ಮುಚ್ಚಲಾಗುತ್ತದೆ.

ಗೋಲಾಕಾರವಾಗಿಲ್ಲ ಇಲ್ಲಿನ ಶಿವಲಿಂಗ: ಎಲ್ಲೆಡೆ ಶಿವಲಿಂಗದ ರೂಪ ಗೋಲಾಕಾರವಾಗಿರುತ್ತದೆ. ಅಥವಾ ಉದ್ದವಾಗಿರುತ್ತದೆ. ಆದರೆ ಇಲ್ಲಿ ಶಿವಲಿಂಗದ ರೂಪ ಚೂಪಾಗಿದೆ. ಇಲ್ಲಿನ ಶಿವಲಿಂಗ ಸ್ವಯಂಭೂ ಎನ್ನಲಾಗುತ್ತದೆ. ಅಂದ್ರೆ ಇಲ್ಲಿನ ಶಿವಲಿಂಗವನ್ನು ಯಾರೂ ನಿರ್ಮಿಸಿಲ್ಲ. ಬದಲಾಗಿ ಇದು ಪ್ರತ್ಯಕ್ಷವಾಗಿರುವ ಶಿವಲಿಂಗವಾಗಿದೆ.

ಕೇದಾರನಾಥ ಮಂದಿರ ನಿರ್ಮಿಸಿದ್ಯಾರು..?: ಕೇದಾರನಾಥ ಮಂದಿರವನ್ನು ಶಂಕರಾಚಾರ್ಯರು ಅಭಿವೃದ್ಧಿ ಮಾಡಿದ್ದರು ಎಂದು ಹೇಳಲಾಗುತ್ತದೆ. ಬಳಿಕ ಹಲವು ವರ್ಷಗಳ ನಂತರ ಮಾಲ್ವಾದ ರಾಜ ಭೋಜ ಈ ಮಂದಿರದ ಜೀರ್ಣೋದ್ಧಾರ ಕಾರ್ಯ ಮಾಡಿದನು.

ದೇವಸ್ಥಾನದ ಗರ್ಭಗುಡಿಗೆ ಸ್ವರ್ಣಲೇಪನ: ಕೆಲ ವರ್ಷಗಳ ಹಿಂದೆ ಕೇದಾರನಾಥನ ಗರ್ಭಗುಡಿ ಬೆಳ್ಳಿಲೇಪಿತವಾಗಿತ್ತು. ಆದರೆ 2022ರಲ್ಲಿ ಈ ಗರ್ಭಗುಡಿಯನ್ನು 550 ಸ್ವರ್ಣದ ಶೀಟ್‌ಗಳನ್ನು ಬಳಸಿ, ಲೇಪನ ಮಾಡಲಾಗಿದೆ.

ಪ್ರವಾಹ ಬಂದರೂ ಗಟ್ಟಿಯಾಗಿ ನಿಂತಿದ್ದ ಕೇದಾರನಾಥ: 2013ರಲ್ಲಿ ಕೇದಾರನಾಥದಲ್ಲಿ ಪ್ರವಾಹ ಅಪ್ಪಳಿಸಿತ್ತು. ಅಕ್ಕ ಪಕ್ಕದಲ್ಲಿದ್ದ ಬಿಲ್ಡೀಂಗ್, ಅಂಗಡಿ ಎಲ್ಲವೂ ಪ್ರವಾಹದಲ್ಲಿ ಅಳಿಸಿ ಹೋಗಿತ್ತು. ಆದರೆ ದೇವಸ್ಥಾನ ಮಾತ್ರ ಹೇಗಿತ್ತೋ, ಹಾಗೇ ಇತ್ತು. ಕಾರಣ ಪ್ರವಾಹ ಬಂದಾಗ, ಅಲ್ಲಿ ಬೃಹತ್ ಬಂಡೆಗಲ್ಲು ಬಂದು, ದೇವಸ್ಥಾನವನ್ನು ತಡೆ ಹಿಡಿದಿತ್ತು. ಆದ ಕಾರಣ ಪ್ರವಾಹ ದೇವಸ್ಥಾನವನ್ನು ಸ್ಪರ್ಶಿಸಲಿಲ್ಲ. ಅದನ್ನು ಭೀಮಶಿಲೆ ಅಥವಾ ದಿವ್ಯಶಿಲೆ ಎಂದು ಹೇಳಲಾಗುತ್ತದೆ.

ಕನ್ನಡಿಗರಿಂದ ನಡೆಯುತ್ತೆ ಕೇದಾರನಿಗೆ ಪೂಜೆ: ಕೇದಾರನಾಥ ಮಂದಿರ ಉತ್ತರಾಖಂಡದಲ್ಲಿದ್ದರೂ, ಇಲ್ಲಿ ಪೂಜೆ ಸಲ್ಲಿಸುವವರು ನಮ್ಮ ಕನ್ನಡಿಗರು. ಇಲ್ಲಿ ಪೂಜೆ ಸಲ್ಲಿಸುವವರನ್ನು ರಾವಲ್ ಎಂದು ಕರೆಯಲಾಗುತ್ತದೆ. ನಮ್ಮ ರಾಜ್ಯದ ವೀರಶೈವ ಲಿಂಗಾಯಿತರು ಇಲ್ಲಿ ಪೂಜೆ ಸಲ್ಲಿಸುತ್ತಾರೆ. ಆದಿ ಶಂಕರಾಚಾರ್ಯರು, ಉತ್ತರ ಮತ್ತು ದಕ್ಷಿಣದ ಬಾಂಧವ್ಯವನ್ನು ಗಟ್ಟಿ ಮಾಡಲು ಈ ವ್ಯವಸ್ಥೆ ಮಾಡಿದ್ದರಂತೆ.

ಸಿಮೆಂಟ್ ಬಳಸದೇ ನಿರ್ಮಿಸಲಾಗಿದೆ ಕೇದಾರನಾಥ ಮಂದಿರ: ಬರೀ ಗ್ರೆನೈಡ್ ಕಲ್ಲು ಬಳಸಿ ಈ ದೇವಸ್ಥಾನದ ನಿರ್ಮಾಣ ಮಾಡಲಾಗಿದೆ. ಹಾಗಾಗಿಯೇ ಯಾವುದೇ ಪ್ರವಾಹ, ಭೂಕಂಪ ಬಂದರೂ, ಈ ದೇವಸ್ಥಾನ ಅಲುಗಾಡುವುದಿಲ್ಲ.

About The Author