ಹಾವೇರಿ ತಾಲೂಕಿನ ಕಬ್ಬೂರು ಗ್ರಾಮದಲ್ಲಿ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಪಕ್ಕದ ಮನೆಯ ವ್ಯಕ್ತಿಯನ್ನ ಹತ್ಯೆ ಮಾಡಿದ ಘಟನೆ ನಡೆದಿದೆ. ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬನನ್ನು ಕಲ್ಲಿನಿಂದ ಜಜ್ಜಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಗ್ರಾಮದಲ್ಲಿ ಆತಂಕ ಮೂಡಿಸಿದೆ. ನಿಂಗಪ್ಪ ಚನ್ನಬಸಪ್ಪ ಕರಿಗಾರ್ (40) ಕೊಲೆಯಾದ ದುರ್ದೈವಿ. ಶಿವು ನಿಂಗಪ್ಪ ಪಟ್ಟೇದವರ ಎಂಬಾತನೇ ಹತ್ಯೆಗೈದ ಆರೋಪಿಯಾಗಿದ್ದು, ಘಟನೆ ಬಳಿಕ ಪೊಲೀಸರ ಮುಂದೆ ಶರಣಾಗಿದ್ದಾನೆ.
ಮೃತ ನಿಂಗಪ್ಪ ಹಾಗೂ ಆರೋಪಿ ಶಿವು ಅವರ ಮನೆಗಳು ಅಕ್ಕಪಕ್ಕದಲ್ಲೇ ಇದ್ದು, ಇಬ್ಬರ ನಡುವೆ ಹಳೆಯ ವೈಷಮ್ಯ ಇತ್ತು ಎಂದು ತಿಳಿದುಬಂದಿದೆ. ಇಬ್ಬರೂ ಮದ್ಯಪಾನದ ಚಟ ಹೊಂದಿದ್ದರಿಂದ ಆಗಾಗ ಜಗಳವಾಗುತ್ತಿತ್ತೆನ್ನಲಾಗಿದೆ. ಸುಮಾರು ಒಂದು ತಿಂಗಳ ಹಿಂದೆಯೂ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಆಗ ಶಿವು ನಿಂಗಪ್ಪನ ಮೇಲೆ ಹಲ್ಲೆ ನಡೆಸಿದ್ದ ಎನ್ನಲಾಗಿದೆ. ಬಳಿಕ ಗ್ರಾಮದ ಹಿರಿಯರು ಮಧ್ಯಸ್ಥಿಕೆ ವಹಿಸಿ ರಾಜಿ ಮಾಡಿಸಿದ್ದರು ಎನ್ನಲಾಗಿದೆ. ಆದರೂ ಇವರಿಬ್ಬರ ನಡುವೆ ವೈಮನಸ್ಸು ಮಾತ್ರ ಮುಂದುವರಿದಿತ್ತು.
ಇಂದು ಬೆಳಿಗ್ಗೆ ಮತ್ತೊಮ್ಮೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕೋಪಗೊಂಡ ಶಿವು ಕಲ್ಲಿನಿಂದ ನಿಂಗಪ್ಪನ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಪರಿಣಾಮ ತೀವ್ರ ರಕ್ತಸ್ರಾವಗೊಂಡ ನಿಂಗಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಬಳಿಕ ನಾನೇ ʼಕೊಲೆ ಮಾಡಿದ್ದೇನೆʼ ಎಂದು ಆರೋಪಿ ಶಿವು ಹಾವೇರಿ ಗ್ರಾಮೀಣ ಪೊಲೀಸರ ಮುಂದೆ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.




