Political News: ಬೆಂಗಳೂರನ್ನು ಬ್ರ್ಯಾಂಡ್ ಬೆಂಗಳೂರು ಮಾಡಲು ಸಿದ್ಧವಾಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಸಂಸದ ತೇಜಸ್ವಿ ಸೂರ್ಯ ಮನವಿ 1ನ್ನು ಮಾಡಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಸಂಸದ ತೇಜಸ್ವಿ ಸೂರ್ಯ, ನಿಮ್ಮ ಅವೈಜ್ಞಾನಿಕ ಪ್ರಯೋಗಗಳಿಗೆ ಬೆಂಗಳೂರನ್ನು ಬಲಿಗೊಡಬೇಡಿ ಡಿ.ಕೆ.ಶಿವಕುಮಾರ್ ಅವರೇ ! ಕೋಟಿ ಕೋಟಿ ಖರ್ಚು ಮಾಡಿ ಕಟ್ಟಿದ ರಾಗಿಗುಡ್ಡ ಫ್ಲೈಓವರ್ ಈಗ ವಾಹನಗಳ ಪ್ರದರ್ಶನ ಮಳಿಗೆಯಾಗಿದೆ. ಯೋಜನಾ ರೂಪರೇಷೆ ಮಾಡುವಾಗ ಇಂಜಿನಿಯರ್ಗಳ ತರ್ಕ ಎಲ್ಲಿ ಹೋಗಿತ್ತು? ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ 4 ಪ್ರಶ್ನೆಗಳನ್ನು ಸಹ ಡಿಸಿಎಂ ಮುಂದಿರಿಸಿದ್ದಾರೆ. ಆ ಪ್ರಶ್ನೆಗಳು ಇಂತಿವೆ.
ಉತ್ತರ ಸಿಗದ ಪ್ರಶ್ನೆಗಳು : 1)ಅಗಲವಾದ ಮೇಲ್ಸೇತುವೆಯಿಂದ ಬರುವ ವಾಹನಗಳು ಕಿರಿದಾದ ಪ್ರವೇಶ/ನಿರ್ಗಮನ ದಾರಿಗಳಲ್ಲಿ ನುಗ್ಗುವಾಗ ಟ್ರಾಫಿಕ್ ಜಾಮ್ ಆಗುತ್ತದೆ (ಬಾಟಲ್ ನೆಕ್ ಎಫೆಕ್ಟ್) ಎಂಬ ಕನಿಷ್ಠ ಜ್ಞಾನ ಇರಲಿಲ್ಲವೇ? ಇದು ವೈಜ್ಞಾನಿಕ ಯೋಜನೆಯೋ ಅಥವಾ ಕೇವಲ ಗುತ್ತಿಗೆದಾರರ ಲಾಭಕ್ಕೋ?
2)ರಸ್ತೆ ಅಗಲ ಮಾಡಿದಷ್ಟೂ ವಾಹನಗಳ ಸಂಖ್ಯೆ ಹೆಚ್ಚುತ್ತದೆಯೇ ಹೊರತು ಟ್ರಾಫಿಕ್ ಕಡಿಮೆ ಆಗುವುದಿಲ್ಲ ಎನ್ನುವುದು ಜಗತ್ತಿಗೇ ತಿಳಿದ ಸತ್ಯ. ಹೀಗಿರುವಾಗ ಸಾರ್ವಜನಿಕ ಸಾರಿಗೆ ಬಲಪಡಿಸುವ ಬದಲು, ಸಾರ್ವಜನಿಕರನ್ನು ಗಂಟೆಗಟ್ಟಲೇ ಕೇವಲ ರಸ್ತೆಗಳಲ್ಲಿಯೇ ಹೈರಾಣಾಗಿಸುತ್ತಿರುವುದು ಯಾವ ಖುಷಿಗಾಗಿ?
3)ಸಂಚಾರ ಎಂಬುದು ನೀರಿನ ಹರಿವಿನಂತೆ. ಮೇಲ್ಸೇತುವೆ ಇಳಿದ ಕೂಡಲೇ ಸಿಗ್ನಲ್ನಲ್ಲಿ ನೂರಾರು ವಾಹನಗಳು ಬಂದು ಅಪ್ಪಳಿಸಿದರೆ, ಅಲ್ಲಿ ಸುಗಮ ಸಂಚಾರ ಸಾಧ್ಯವೇ?
4)ಕೇವಲ ಟ್ರಾಫಿಕ್ ಅನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಶಿಫ್ಟ್ ಮಾಡುವುದೇ ಸಾಧನೆಯೇ?
ನಮ್ಮ ಬೆಂಗಳೂರು ಮಾದರಿ ನಗರವಾಗಬೇಕೇ ಹೊರತು, ಹದಗೆಟ್ಟ ಮೂಲಸೌಕರ್ಯದ ಪ್ರಯೋಗಶಾಲೆಯಾಗಬಾರದು! ಬೆಂಗಳೂರಿಗರ ತೆರಿಗೆ ಹಣವನ್ನು ಇಂತಹ ‘Trial and Error’ ಪ್ರಯೋಗಗಳಿಗೆ ಬಲಿ ಕೊಡಬಾರದು. ನಮಗೆ ಬೇಕಿರೋದು ದೂರದೃಷ್ಟಿಯ ಯೋಜನೆಗಳು, ಕೇವಲ ಕಣ್ಣೊರೆಸುವ ತಂತ್ರಗಳಲ್ಲ ಎಂದು ತೇಜಸ್ವಿ ಸೂರ್ಯ ಹೇಳಿದ್ದಾರೆ.
ಬೆಂಗಳೂರಿಗರ ನೆಮ್ಮದಿಯನ್ನು ಹಾಳು ಮಾಡಲೆಂದೇ ಇರುವ, ದೂರದೃಷ್ಟಿ ಇಲ್ಲದ ಈ ‘ಡಬಲ್ ಡೆಕ್ಕರ್’ ನಂತಹ ಯೋಜನೆಗಳನ್ನು ಕೂಡಲೇ ಕೈಬಿಡಿ. ಸರಿಯಾದ ಅಧ್ಯಯನವಿಲ್ಲದೆ ಮಾಡಿದ ಈ ಎಡವಟ್ಟಿನಿಂದಾಗಿ ಸುಂದರವಾಗಿದ್ದ ಜಯನಗರ ಇಂದು ಸಂಚಾರ ದಟ್ಟಣೆಯ ನರಕವಾಗಿದೆ. ಜನರ ತೆರಿಗೆ ಹಣದಲ್ಲಿ ನಡೆಯುವ ಇಂತಹ ಸರ್ಕಸ್ ನಿಲ್ಲಿಸಿ. ಬಿಲ್ಡರ್-ಕಾಂಟ್ರಾಕ್ಟರ್ ಲಾಬಿಗೆ ಮಣಿದು ಸುರಂಗ ರಸ್ತೆ, ಮೇಲ್ಸೇತುವೆಗಳ ಮೇಲೆ ಕೋಟಿ ಸುರಿಯುವ ಬದಲು, ಕೊನೆ ಹಂತದವರೆಗೆ ಸಂಪರ್ಕ ಸಾಧಿಸುವ ಕಡೆಗೆ ಗಮನ ಹರಿಸಿ ಎಂದು ಡಿಸಿಎಂಗೆ ತೇಜಸ್ವಿ ಸೂರ್ಯ ಮನವಿ ಮಾಡಿದ್ದಾರೆ.




