ಕನ್ನಡ ಕಿರುತೆರೆ ಪ್ರೇಕ್ಷಕರ ಮನಸ್ಸಿನಲ್ಲಿ ತನ್ನದೇ ಆದ ವಿಶೇಷ ಸ್ಥಾನ ಪಡೆದಿದ್ದ ನಟ ದಿಲೀಪ್ ರಾಜ್ ಇನ್ನು ನೆನಪು ಮಾತ್ರ. ತೆರೆ ಮೇಲೆ ಸದಾ ನಗುತ್ತಾ ಕಾಣುತ್ತಿದ್ದ ಆ ಮುಖ, ಸರಳ ಮಾತು, ಸಹಜ ಅಭಿನಯ ಮತ್ತು ಆತ್ಮೀಯ ವ್ಯಕ್ತಿತ್ವ ಈಗ ನೆನಪು ಮಾತ್ರ. ಅವರ ಅಕಾಲಿಕ ನಿಧನದ ಸುದ್ದಿ ಹೊರಬಿದ್ದ ಕ್ಷಣದಿಂದಲೇ ಕನ್ನಡ ಕಿರುತೆರೆ ಮತ್ತು ಸಿನಿ ಲೋಕದಲ್ಲಿ ಮೌನದ ನೋವು ಆವರಿಸಿದೆ.
ಸಿನಿಮಾ ಅಥವಾ ಧಾರಾವಾಹಿಗಳ ಹಿನ್ನಲೆಯಲ್ಲಿ ಯಾರ ಬೆಂಬಲವೂ ಇಲ್ಲದೆ, ಸಾಮಾನ್ಯ ಕಲಾವಿದನಾಗಿ ಆರಂಭಿಸಿದ ದಿಲೀಪ್ ರಾಜ್ ತಮ್ಮ ಸ್ವಂತ ಪರಿಶ್ರಮದಿಂದಲೇ ಬೆಳೆದು ದೊಡ್ಡ ಸ್ಥಾನ ಪಡೆದುಕೊಂಡಿದ್ದ ವ್ಯಕ್ತಿ. ಸಣ್ಣ ಪಾತ್ರಗಳಿಂದ ಆರಂಭವಾದ ಅವರ ಪಯಣ, ನಂತರ ಕನ್ನಡ ಕಿರುತೆರೆಯ ಮನೆಮಾತಾದ ಕಲಾವಿದನಾಗಿ ರೂಪುಗೊಂಡಿತು. ‘ಹಿಟ್ಲರ್ ಕಲ್ಯಾಣ’ ಧಾರಾವಾಹಿಯಲ್ಲಿ ಅವರು ಮೂಡಿಸಿದ್ದ ಪಾತ್ರ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗಿತ್ತು.
ಕೇವಲ ನಟನಾಗಿ ಮಾತ್ರವಲ್ಲ, ನಿರ್ಮಾಪಕರಾಗಿಯೂ ಅವರು ಹಲವರ ವಿಶ್ವಾಸ ಗಳಿಸಿದ್ದರು. ‘ಪಾರು’, ‘ಬ್ರಹ್ಮಗಂಟು’, ‘ವಧು’ ಸೇರಿದಂತೆ ಹಲವು ಧಾರಾವಾಹಿಗಳ ಹಿಂದೆ ಅವರ ಕನಸು, ಕಷ್ಟ ಮತ್ತು ತಂಡದ ಮೇಲಿನ ನಂಬಿಕೆ ಇತ್ತು. ಕೆಲಸದ ವಿಷಯದಲ್ಲಿ ಅವರು ಎಷ್ಟು ಗಂಭೀರರಾಗಿದ್ದರೋ, ವ್ಯಕ್ತಿಯಾಗಿ ಅಷ್ಟೇ ಮೃದು ಮನಸ್ಸಿನವರಾಗಿದ್ದರು. ಚಿತ್ರೀಕರಣದ ಸೆಟ್‌ನಲ್ಲಿ ಹಿರಿಯ-ಕಿರಿಯ ಎನ್ನದೇ ಎಲ್ಲರ ಜೊತೆ ಬೆರೆಯುತ್ತಿದ್ದ ಅವರು, ಹೊಸ ಕಲಾವಿದರಿಗೆ ಧೈರ್ಯ ತುಂಬುತ್ತಿದ್ದರು. ಯಾವತ್ತೂ ಕೋಪದಿಂದ ಮಾತನಾಡುತ್ತಲೇ ಇರಲಿಲ್ಲ, ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದ ವ್ಯಕ್ತಿತ್ವ ಎಂದು ಸಹ ಕಲಾವಿದರು ಇಂದು ಕಣ್ಣೀರಿಡುತ್ತಿದ್ದಾರೆ.
ಅಭಿಮಾನಿಗಳೊಂದಿಗೆ ಕೂಡ ದಿಲೀಪ್ ರಾಜ್ ತುಂಬಾ ಆತ್ಮೀಯವಾಗಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಕಳಿಸಿದವರಿಗೂ ಸಮಯ ಸಿಕ್ಕಾಗ ಉತ್ತರಿಸುತ್ತಿದ್ದ ಅವರು, ತಮ್ಮ ಜನಪ್ರಿಯತೆಯನ್ನು ಎಂದಿಗೂ ಅಹಂಕಾರವನ್ನಾಗಿಸಿಕೊಳ್ಳಲಿಲ್ಲ. ಅದಕ್ಕೇ ಬಹುಶಃ ಅವರು ಕೇವಲ ನಟನಾಗಿ ಅಲ್ಲ, ಮನೆಯವರಂತೆಯೇ ಅನೇಕ ಜನರ ಮನಸ್ಸಿನಲ್ಲಿ ಮನೆಮಾಡಿಕೊಂಡಿದ್ದಾರೆ.
ಅವರ ನಿಧನದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋಗಳು, ಹಳೆಯ ದೃಶ್ಯಗಳು ಮತ್ತು ಅಭಿಮಾನಿಗಳ ಭಾವನಾತ್ಮಕ ಬರಹಗಳು ಅವರ ಮೇಲೆ ಜನರಿಗೆ ಇದ್ದ ಪ್ರೀತಿಯನ್ನು ಮತ್ತೊಮ್ಮೆ ಅವರ ಸರಳತೆಗೆ ಸಾಕ್ಷಿಯಾಗಿವೆ. ಇನ್ನೂ ಸಾಕಷ್ಟು ವರ್ಷಗಳು ಕನ್ನಡ ಕಿರುತೆರೆಯಲ್ಲಿ ಮಿಂಚಬೇಕಿದ್ದ ಕಲಾವಿದ ಎನ್ನುವ ಮಾತು ಕೇಳಿ ಬರುತ್ತಿದೆ.
ಒಬ್ಬ ಕಲಾವಿದ ತೆರೆಯ ಮೇಲೆ ಕಾಣಿಸದೇ ಹೋದರೂ, ಅವರು ಮೂಡಿಸಿದ ಪಾತ್ರಗಳು ಎಂದಿಗೂ ಜೀವಂತವಾಗಿ ಉಳಿಯುತ್ತವೆ. ದಿಲೀಪ್ ರಾಜ್ ಕೂಡ ಅಂತಹ ಅಪರೂಪದ ಕಲಾವಿದರಲ್ಲಿ ಒಬ್ಬರು. ಅವರ ನಗು, ಸರಳತೆ ಮತ್ತು ಅಭಿನಯ ಕನ್ನಡಿಗರ ಮನಸ್ಸಿನಲ್ಲಿ ಸದಾ ಉಳಿಯಲಿದೆ. ಕನ್ನಡ ಕಿರುತೆರೆಯ ಆ ಆತ್ಮೀಯ ಮುಖ ಇಂದು ದೂರವಾದರೂ, ಅವರು ಬಿಟ್ಟುಹೋದ ನೆನಪುಗಳು ಮಾತ್ರ ಎಂದಿಗೂ ಮಸುಕಾಗುವುದಿಲ್ಲ.




