ʼ4 ವರ್ಷʼ ಗಳ ಬಳಿಕ ಮಗ ವಾಪಸ್! ಕಬಡ್ಡಿ ಆಟದಿಂದ ಸಿಕ್ಕಿಬಿದ್ದ ಬಾಲಕ!

ನಾಲ್ಕು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಬಾಲಕ ಕೊನೆಗೂ ಕುಟುಂಬದ ಮಡಿಲು ಸೇರಿದ್ದಾನೆ. ವಿಶೇಷವೆಂದರೆ ಬಾಲಕನಿಗೆ ಇದ್ದ ಕಬಡ್ಡಿ ಆಸಕ್ತಿಯೇ ಆತನನ್ನು ಪತ್ತೆಹಚ್ಚಲು ಕಾರಣವಾಗಿದೆ.

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹಿರೇಮರಹಳ್ಳಿ ಗ್ರಾಮದ ಕಿಶೋರ್ ಎಂಬ ಬಾಲಕ 2022ರ ಆಗಸ್ಟ್‌ನಲ್ಲಿ ತಂಗಳಗೆರೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ನಾಪತ್ತೆಯಾಗಿದ್ದ. ಮಗನಿಗಾಗಿ ಕುಟುಂಬಸ್ಥರು ಹಾಗೂ ಪೊಲೀಸರು ಹಲವು ವರ್ಷಗಳಿಂದ ಹುಡುಕಾಟ ನಡೆಸುತ್ತಿದ್ದರು. ತನಿಖೆಯಲ್ಲಿ ಕಿಶೋರ್‌ನನ್ನು ಯಾರೂ ಅಪಹರಣ ಮಾಡಿಲ್ಲ ಎಂಬುದು ತಿಳಿದುಬಂದಿದ್ದು, ಓದಲು ಆಸಕ್ತಿ ಇಲ್ಲದ ಕಾರಣ ಆತನೇ ಶಾಲೆಯ ಕಾಂಪೌಂಡ್ ಹಾರಿ ಬೆಂಗಳೂರಿಗೆ ತೆರಳಿದ್ದಾನೆ ಎನ್ನಲಾಗದೆ. ಕಳೆದ ನಾಲ್ಕು ವರ್ಷಗಳಿಂದ ಬೆಂಗಳೂರಿನ ವಿವಿಧ ಹೋಟೆಲ್‌ಗಳಲ್ಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಬಡ್ಡಿ ಆಟದ ಮೇಲೆ ವಿಶೇಷ ಆಸಕ್ತಿ ಹೊಂದಿದ್ದ ಕಿಶೋರ್, ಸ್ಥಳೀಯ ಟೂರ್ನಮೆಂಟ್‌ಗಳಲ್ಲಿ ಭಾಗವಹಿಸುತ್ತಿದ್ದ ವೇಳೆ ಪರಿಚಿತರ ಕಣ್ಣಿಗೆ ಬಿದ್ದಿದ್ದಾನೆ. ಈ ಮಾಹಿತಿ ಪೊಲೀಸರಿಗೆ ತಲುಪಿದ ಬಳಿಕ ಆತನನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಕುಟುಂಬದವರಿಗೆ ಒಪ್ಪಿಸಲಾಗಿದೆ. ನಾಲ್ಕು ವರ್ಷಗಳ ಬಳಿಕ ಮಗ ಮನೆಗೆ ಮರಳಿದ ಹಿನ್ನೆಲೆ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದು, ಬಾಲಕನ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ.

About The Author