ಮುಸ್ಲಿಂ ಸಮುದಾಯದ ಭರವಸೆಗಳ ಅನುಷ್ಠಾನ ಹಾಗೂ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ರಾಜ್ಯದಲ್ಲಿ ಮತ್ತೆ ಚರ್ಚೆಗಳು ಕೇಳಿಬರುತ್ತಿವೆ. ಈ ಕುರಿತು ಮೇ 16ರಂದು ಬೆಂಗಳೂರಿನಲ್ಲಿ ನಡೆಯಲಿರುವ ‘ಕರ್ನಾಟಕ ಮುಸ್ಲಿಂ ಸಮಾವೇಶ’ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗುತ್ತಿದೆ. ಈ ಸಮಾವೇಶದಲ್ಲಿ ಸರ್ಕಾರದ ನೀತಿಗಳ ಕುರಿತು ವಿಶೇಷ ವರದಿ ಬಿಡುಗಡೆ ಮಾಡಲು ಸಂಘಟನೆಗಳು ಮುಂದಾಗಿವೆ. ರಾಜ್ಯದಲ್ಲಿನ ಮುಸ್ಲಿಂ ಸಮುದಾಯಕ್ಕೆ ನೀಡಲಾದ ಭರವಸೆಗಳು ಎಷ್ಟು ಮಟ್ಟಿಗೆ ಈಡೇರಿವೆ ಎಂಬ ಪ್ರಶ್ನೆ ಮತ್ತೊಮ್ಮೆ ಮುಂಚೂಣಿಗೆ ಬಂದಿದೆ.
ಈ ಹಿನ್ನೆಲೆ ಮೇ 16ರಂದು ಬೆಂಗಳೂರಿನ ಪುರಭವನ ಸಭಾಂಗಣದಲ್ಲಿ ‘ಕರ್ನಾಟಕ ಮುಸ್ಲಿಂ ಸಮಾವೇಶ’ ಆಯೋಜಿಸಲಾಗಿದೆ. ರಾಜ್ಯದ ವಿವಿಧ ಭಾಗಗಳಿಂದ ಮುಸ್ಲಿಂ ಸಂಘಟನೆಗಳು, ಜಮಾಅತ್ಗಳು ಹಾಗೂ ಸಮುದಾಯ ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟದ ಅಡ್ ಹಾಕ್ ಸಮಿತಿ ಈ ಸಮಾವೇಶವನ್ನು ಆಯೋಜಿಸಿದ್ದು, ʼಕಾಂಗ್ರೆಸ್ ಸರ್ಕಾರ ಹೇಳಿದ್ದೇನು? ಮಾಡಿದ್ದೇನು? ಮುಂದೇನು?ʼ ಎಂಬ ಶೀರ್ಷಿಕೆಯ ವಿಶೇಷ ವರದಿ ಬಿಡುಗಡೆ ಮಾಡಲು ಸಿದ್ಧತೆ ನಡೆದಿದೆ. ಇದರ ಪೂರ್ವ ತಯಾರಿ ಯಾಗಿ ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಡಿವೈಎಸ್ಪಿ ಹಾಗೂ ಸಮಿತಿಯ ಸಂಚಾಲಕ ಸುಹೇಲ್ ಅಹ್ಮದ್ ಮರೂರ್, ಕಳೆದ ಮೂರು ವರ್ಷಗಳಲ್ಲಿ ಸರ್ಕಾರದ ಕಾರ್ಯವೈಖರಿ ಕುರಿತು ಸಮುದಾಯದಲ್ಲಿ ಅಸಮಾಧಾನ ಮತ್ತು ಪ್ರಶ್ನೆಗಳು ಹೆಚ್ಚುತ್ತಿವೆ ಎಂದು ಹೇಳಿದ್ದಾರೆ. ಮಾಧ್ಯಮ ಮಿತ್ರರೊಂದಿಗೆ ಮಾತನಾಡಿ ಮುಸ್ಲಿಂ ಸಮಾವೇಶಕ್ಕೆ ಕರೆ ನೀಡಿದ್ದಾರೆ.
ಮೀಸಲಾತಿ, ಹಿಜಾಬ್ ನಿರ್ಬಂಧ, ವಕ್ಫ್ ಆಸ್ತಿ ವಿಚಾರ, ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳಂತಹ ಪ್ರಮುಖ ವಿಷಯಗಳ ಜೊತೆಗೆ ಶಿಕ್ಷಣ, ವಿದ್ಯಾರ್ಥಿ ವೇತನ, ಬಜೆಟ್ ಹಂಚಿಕೆ ಹಾಗೂ ರಾಜಕೀಯ ಪ್ರಾತಿನಿಧ್ಯದ ವಿಚಾರಗಳು ಸಮಾವೇಶದಲ್ಲಿ ಪ್ರಮುಖವಾಗಿ ಚರ್ಚೆಯಾಗಲಿವೆ ಎಂದು ಅವರು ವಿವರಿಸಿದರು. ವೆಲ್ಫೇರ್ ಆಫ್ ಹ್ಯುಮಾನಿಟಿ ಫೌಂಡೇಶನ್ ಅಧ್ಯಕ್ಷ ಮೌಲಾನಾ ಶಬ್ಬೀರ್ ಅಹ್ಮದ್ ಹುಸೇನ್ ನದ್ವಿ ಮಾತನಾಡಿ, ʼಈ ಸಮಾವೇಶದ ಉದ್ದೇಶ ಯಾರನ್ನೂ ಗುರಿಯಾಗಿಸುವುದಲ್ಲ. ಆದರೆ ಸರ್ಕಾರ ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಸ್ಪಷ್ಟತೆ ಪಡೆಯುವುದು ಅಗತ್ಯʼ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ತನ್ವೀರ್ ಅಹ್ಮದ್, ಯಹ್ಯಾ ದಾಮೂದಿ ಸೇರಿದಂತೆ ಹಲವು ಉಲೇಮಾಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. ಒಟ್ಟಾರೆ, ಮುಸ್ಲಿಂ ಸಮುದಾಯದ ಹಕ್ಕುಗಳು ಮತ್ತು ಸರ್ಕಾರದ ಭರವಸೆಗಳ ಅನುಷ್ಠಾನದ ಕುರಿತು ನಡೆಯಲಿರುವ ಈ ಸಮಾವೇಶ ರಾಜ್ಯ ರಾಜಕೀಯದಲ್ಲಿ ಬಹು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಲಿದೆ.




