ವಿದೇಶಿ ಪ್ರಯಾಣದ ಮೇಲೆ ಸೆಸ್, ತೆರಿಗೆ ಅಥವಾ ಸರ್ಚಾರ್ಜ್ ವಿಧಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂಬ ವರದಿಗಳನ್ನು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ. ಈ ಕುರಿತು ಮಾಧ್ಯಮ ವರದಿಯೊಂದನ್ನು ಉಲ್ಲೇಖಿಸಿ ತಮ್ಮ ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ʼಇದು ಸಂಪೂರ್ಣ ಸುಳ್ಳು. ವಿದೇಶಿ ಪ್ರಯಾಣದ ಮೇಲೆ ಯಾವುದೇ ರೀತಿಯ ನಿರ್ಬಂಧ ಅಥವಾ ಹೆಚ್ಚುವರಿ ತೆರಿಗೆ ವಿಧಿಸುವ ಪ್ರಶ್ನೆಯೇ ಇಲ್ಲʼ ಎಂದು ತಿಳಿಸಿದ್ದಾರೆ.
ದೇಶದ ಜನರಿಗೆ ಸುಲಭ ಜೀವನ ಮತ್ತು ವ್ಯವಹಾರ ವಾತಾವರಣ ಒದಗಿಸುವುದಕ್ಕೆ ಸರ್ಕಾರ ಬದ್ಧವಾಗಿದೆ ಎಂದು ಪ್ರಧಾನಿ ಹೇಳಿದ್ದಾರೆ. ಸರ್ಕಾರದ ಉದ್ದೇಶ ಜನರ ಮೇಲೆ ಹೆಚ್ಚುವರಿ ಭಾರ ಹಾಕುವುದು ಅಲ್ಲ, ಬದಲಾಗಿ ಆರ್ಥಿಕ ಸ್ಥಿರತೆಯನ್ನು ಕಾಪಾಡುವ ಜೊತೆಗೆ ಜನಸಾಮಾನ್ಯರ ಹಿತವನ್ನು ರಕ್ಷಿಸುವುದಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಧಾನಿಗಳ ಪ್ರತಿಕ್ರಿಯೆಯ ನಂತರ ಆ ವರದಿ ಪ್ರಕಟಿಸಿದ್ದ ಮಾಧ್ಯಮ ಸಂಸ್ಥೆಯೂ ತನ್ನ ಸುದ್ದಿಯನ್ನು ಹಿಂತೆಗೆದುಕೊಂಡಿದೆ. ʼಸರ್ಕಾರ ವಿದೇಶಿ ಪ್ರಯಾಣದ ಮೇಲೆ ತೆರಿಗೆ ಅಥವಾ ಸೆಸ್ ವಿಧಿಸಲು ಚಿಂತಿಸುತ್ತಿದೆ ಎನ್ನುವ ವರದಿ ನಿಖರವಾಗಿರಲಿಲ್ಲ. ಈ ತಪ್ಪಿಗೆ ವಿಷಾದಿಸುತ್ತೇವೆʼ ಎಂದು ಸಂಸ್ಥೆ ಎಕ್ಸ್ ಪೋಸ್ಟ್ ಮೂಲಕ ಕ್ಷಮೆಯಾಚಿಸಿದೆ.
ಇತ್ತೀಚೆಗೆ ಮಧ್ಯಪ್ರಾಚ್ಯದಲ್ಲಿ ಉದ್ಭವಿಸಿರುವ ಅಶಾಂತಿ ಮತ್ತು ಜಾಗತಿಕ ಆರ್ಥಿಕ ಅನಿಶ್ಚಿತತೆಯಿಂದ ಕಚ್ಚಾ ತೈಲ ಪೂರೈಕೆಯ ಮೇಲೆ ಒತ್ತಡ ಹೆಚ್ಚಾಗಿದೆ. ಇದರ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲದ ಬೆಲೆ ಏರಿಕೆಯಾಗಿದ್ದು, ಹಲವು ದೇಶಗಳು ಇಂಧನ ಬಳಕೆಯಲ್ಲಿ ಮಿತವ್ಯಯಕ್ಕೆ ಒತ್ತು ನೀಡುತ್ತಿವೆ. ಭಾರತವೂ ಇದೇ ಹಿನ್ನೆಲೆಯಲ್ಲಿ ಎಚ್ಚರಿಕೆಯಿಂದ ಕ್ರಮಗಳನ್ನು ಕೈಗೊಳ್ಳುತ್ತಿದೆ.
ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಾರ್ವಜನಿಕರಿಗೆ ಮಿತವ್ಯಯದ ಸಂದೇಶ ನೀಡಿದ್ದರು. ಅನಗತ್ಯ ವಿದೇಶಿ ಪ್ರವಾಸಗಳನ್ನು ತಪ್ಪಿಸುವುದು, ಸಾರ್ವಜನಿಕ ಸಾರಿಗೆ ಹೆಚ್ಚು ಬಳಸುವುದು ಮತ್ತು ಚಿನ್ನ ಖರೀದಿಯನ್ನು ನಿಯಂತ್ರಿಸುವ ಮೂಲಕ ದೇಶದ ವಿದೇಶಿ ವಿನಿಮಯ ಮೀಸಲು ಹಾಗೂ ಇಂಧನ ಸಂಪನ್ಮೂಲಗಳನ್ನು ಉಳಿಸಲು ಸಹಕರಿಸುವಂತೆ ಅವರು ಮನವಿ ಮಾಡಿದ್ದರು. ಆದರೆ ಈ ಮನವಿಯನ್ನು ಕೆಲವರು ವಿದೇಶಿ ಪ್ರಯಾಣದ ಮೇಲಿನ ಹೊಸ ತೆರಿಗೆ ಕ್ರಮದೊಂದಿಗೆ ಸಂಪರ್ಕಿಸಿದ ಹಿನ್ನೆಲೆಯಲ್ಲಿ ಗೊಂದಲ ಉಂಟಾಗಿತ್ತು.
ಇದುವರೆಗೆ ಪೆಟ್ರೋಲ್ ರಫ್ತಿನ ಮೇಲೆ ಯಾವುದೇ ವಿಶೇಷ ಸುಂಕ ಇರಲಿಲ್ಲ. ಆದರೆ ಈ ಬಾರಿ ಮೊದಲ ಬಾರಿಗೆ SAED ವಿಧಿಸಿರುವುದು ಗಮನಾರ್ಹವಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯ ಸ್ಥಿತಿಗತಿಗಳನ್ನು ಗಮನಿಸಿ ಸರ್ಕಾರ ಪ್ರತಿ ಎರಡು ವಾರಗಳಿಗೊಮ್ಮೆ ಈ ದರಗಳನ್ನು ಪರಿಶೀಲಿಸುತ್ತದೆ.




