ಮೇ 16 ರಿಂದ ತೈಲ ನೀತಿ ಜಾರಿ ಪೆಟ್ರೋಲ್ ರಫ್ತಿಗೆ ಹೊಸ ಟ್ಯಾಕ್ಸ್!?

ಪಶ್ಚಿಮ ಏಷ್ಯಾದಲ್ಲಿ ಮುಂದುವರಿದಿರುವ ಸಂಘರ್ಷದ ಪರಿಣಾಮ ಜಾಗತಿಕ ಮಟ್ಟದಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ ಪೆಟ್ರೋಲ್, ಡೀಸೆಲ್ ಹಾಗೂ ವಿಮಾನ ಇಂಧನ ರಫ್ತು ಮೇಲಿನ ವಿಶೇಷ ಹೆಚ್ಚುವರಿ ಅಬಕಾರಿ ಸುಂಕ ದರಗಳನ್ನು ಮತ್ತೊಮ್ಮೆ ಪರಿಷ್ಕರಿಸಿದೆ. ಈ ಹೊಸ ದರಗಳು ಮೇ 16ರಿಂದ ಜಾರಿಗೊಳ್ಳಲಿದೆ.

ಮೊದಲ ಬಾರಿಗೆ ಪೆಟ್ರೋಲ್ ರಫ್ತಿನ ಮೇಲೆ ಲೀಟರ್‌ಗೆ ₹3 SAED ವಿಧಿಸಲಾಗಿದೆ. ಅದೇ ವೇಳೆ, ಡೀಸೆಲ್ ರಫ್ತು ಸುಂಕವನ್ನು ಲೀಟರ್‌ಗೆ ₹23ರಿಂದ ₹16.5ಕ್ಕೆ ಹಾಗೂ ATF ಮೇಲಿನ ಸುಂಕವನ್ನು ₹33ರಿಂದ ₹16ಕ್ಕೆ ಇಳಿಸಲಾಗಿದೆ. ಆದರೆ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲೆ ಇದರ ಯಾವುದೇ ಪರಿಣಾಮ ಇರುವುದಿಲ್ಲ ಎಂದು ಸರ್ಕಾರ ತಿಳಿಸಿದೆ.

ಇತ್ತೀಚೆಗೆ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಿಂದ ಜನರು ಸಂಕಷ್ಟ ಎದುರಿಸುತ್ತಿರುವ ಸಮಯದಲ್ಲೇ ಈ ನಿರ್ಧಾರ ಪ್ರಕಟವಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿದಾಗ ಭಾರತೀಯ ಸಂಸ್ಕರಣಾಗಾರಗಳಿಗೆ ರಫ್ತಿನಲ್ಲಿ ಹೆಚ್ಚು ಲಾಭ ಸಿಗುತ್ತದೆ. ಇದರಿಂದ ದೇಶೀಯ ಪೂರೈಕೆಗೆ ತೊಂದರೆ ಆಗದಂತೆ ನೋಡಿಕೊಳ್ಳಲು ಸರ್ಕಾರ ಈ ತೆರಿಗೆ ದರಗಳನ್ನು ಪರಿಷ್ಕರಿಸುತ್ತದೆ.

ಏಪ್ರಿಲ್ ತಿಂಗಳಲ್ಲಿ ಅಂತರರಾಷ್ಟ್ರೀಯ ಕಚ್ಚಾ ತೈಲದ ಬೆಲೆ ಬ್ಯಾರೆಲ್‌ಗೆ 120 ಡಾಲರ್‌ವರೆಗೆ ಏರಿಕೆಯಾಗಿದ್ದ ಕಾರಣ ಸರ್ಕಾರ ಡೀಸೆಲ್ ಮತ್ತು ATF ಮೇಲಿನ ಸುಂಕವನ್ನು ಹೆಚ್ಚಿಸಿತ್ತು. ಬಳಿಕ ಬೆಲೆಗಳಲ್ಲಿ ಸ್ವಲ್ಪ ಇಳಿಕೆಯಾಗುತ್ತಿದ್ದಂತೆ ಇದೀಗ ಸುಂಕವನ್ನು ಭಾಗಶಃ ಕಡಿತಗೊಳಿಸಲಾಗಿದೆ. ತೈಲ ಮಾರುಕಟ್ಟೆಯ ಪರಿಸ್ಥಿತಿಯನ್ನು ಆಧರಿಸಿ ಮುಂದಿನ ದಿನಗಳಲ್ಲೂ ದರ ಪರಿಷ್ಕರಣೆ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

About The Author