Political News: ಬಿಡದಿ ಟೌನ್‌ಶಿಪ್ ನಿರ್ಮಾಣದ ಬಗ್ಗೆ ಹಿರಿಯ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೈತರ ಭೂಮಿಯನ್ನು ಕಸಿದು, ಟೌನ್‌ಶಿಪ್ ನಿರ್ಮಾಣ ಮಾಡಲು ನಿರ್ಧರಿಸಿರುವ ಸರ್ಕಾರದ ನಿರ್ಧಾರದ ವಿರುದ್ಧ ಕಿಡಿಕಾರಿದ್ದಾರೆ.
ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿರುವ ಅವರು, ಬಿಡದಿ ಟೌನ್ ಶಿಪ್ ನಿರ್ಮಾಣಕ್ಕೆ ರೈತರ ಫಲವತ್ತಾದ ಭೂಮಿಯನ್ನು ಸರ್ಕಾರ ಒತ್ತಡದಿಂದ ತೆಗೆದುಕೊಳ್ಳುತ್ತಿರುವುದು ಮೂರ್ಖತನದ ನಿರ್ಧಾರ. ಟೌನ್ ಶಿಪ್ ಮಾಡಲು ಬೇರೆ ಕಡೆ ಭೂಮಿ ಲಭ್ಯವಿದ್ದರೂ ಸಹ ಉತ್ತಮ ಫಲ ನೀಡುತ್ತಿರುವ ಜಮೀನನ್ನು ಪಡೆದು ಅಲ್ಲಿ ಟೌನ್ ಶಿಪ್ ಮಾಡುವ ಸರ್ಕಾರದ ನಿರ್ಧಾರ ವಿವೇಚನಾರಹಿತವಾದದ್ದು ಎಂದು ಯತ್ನಾಳ್ ಕಿಡಿಕಾರಿದ್ದಾರೆ.
ಮಾನ್ಯ ಸರ್ವೋಚ್ಛ ನ್ಯಾಯಾಲಯವು ತನ್ನ ಹಲವು ತೀರ್ಪುಗಳಲ್ಲಿ ಫಲವತ್ತಾದ ಭೂಮಿಯನ್ನು ರಾಜ್ಯ ಸರ್ಕಾರ ಒತ್ತಡ ಹೇರಿ ಅಲ್ಲಿ ಕಾಂಪ್ಲೆಕ್ಸ್, ಅಪಾರ್ಟ್ಮೆಂಟ್, ಟೌನ್ ಶಿಪ್ ಕಟ್ಟಬಾರದು ಎಂದು ಹೇಳಿದ್ದರೂ ಸಹ ಸರ್ಕಾರ ರಿಯಲ್ ಎಸ್ಟೇಟ್ ಮಾಫಿಯಾ ಗೆ ಮಣಿದು ಸರ್ಕಾರ ಈ ಯೋಜನೆಯನ್ನು ಮುಂದುವರೆಸುತ್ತಿರುವುದು ಖಂಡನೀಯ. ಇಲ್ಲಿನ ಸ್ಥಳೀಯ ರೈತರು ಕಳೆದ 428 ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದರೂ ಸಹ ಕಿವಿಗೊಡದೆ ಯೋಜನೆಯನ್ನು ಮುಂದುವರೆಸುತ್ತಿರುವುದು ಈ ಸರ್ಕಾರ ‘ಲ್ಯಾಂಡ್ ಮಾಫಿಯಾ’ ಒತ್ತಡಕ್ಕೆ ಮಣಿದಿದೆ ಎಂದು ತೋರಿಸುತ್ತದೆ ಎಂದು ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಬಿಡದಿಯ ಈ ಫಲವತ್ತಾದ ಭೂಮಿಯಲ್ಲಿ ರೈತರು ಅಡಿಕೆ, ಬಾಳೆ, ರಾಗಿ, ಮಾವು, ಜೋಳವನ್ನು ಬೆಳೆದು ರೈತರು ಸಮೃದ್ಧರಾಗಿದ್ದಾರೆ . ಈ ಭಾಗದಿಂದ ಬೆಂಗಳೂರಿಗೆ ಹಾಲು, ಹಣ್ಣು ಹಾಗೂ ತರಕಾರಿ ಸರಬರಾಜು ಆಗುತ್ತಿರುವುದು ಗಮನಾರ್ಹ. ಈ ರೀತಿಯಾದ multi cropped belt (ಹಲವು ಬೆಳೆಗಳನ್ನು ಬೆಳೆಯಬಹುದಾದ ಭೂಮಿ) ಯನ್ನು ಲ್ಯಾಂಡ್ ಮಾಫಿಯಾ ಗೆ ಕೊಡುವ ನಿರ್ಧಾರವನ್ನು ಸರ್ಕಾರ ಕೂಡಲೇ ಕೈಬಿಡಬೇಕು ಎಂದು ಯತ್ನಾಳ್ ಆಗ್ರಹಿಸಿದ್ದಾರೆ.




