ಚೆನ್ನಮ್ಮ ವೃತ್ತದಲ್ಲಿ ಅಭಿಮಾನಿಗಳ ಸಮುದ್ರ: ಪಟಾಕಿ, ಡಿಜೆ, ಡ್ಯಾನ್ಸ್ ಸಂಭ್ರಮ

ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ಐತಿಹಾಸಿಕ ಗೆಲುವು ಸಾಧಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದ ಬೆನ್ನಲ್ಲೇ, ಹುಬ್ಬಳ್ಳಿಯಲ್ಲಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿದೆ. ನಗರದ ಪ್ರಮುಖ ಕೇಂದ್ರವಾದ ಚೆನ್ನಮ್ಮ ವೃತ್ತದಲ್ಲಿ ಸಾವಿರಾರು ಅಭಿಮಾನಿಗಳು ಜಮಾಯಿಸಿ ಪಟಾಕಿ ಸಿಡಿಸಿ, ನೃತ್ಯ ಮಾಡಿ ಹಾಗೂ ಘೋಷಣೆಗಳನ್ನು ಕೂಗಿ ವಿಜಯೋತ್ಸವವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.

ಆರ್‌ಸಿಬಿ ಫೈನಲ್ ಪಂದ್ಯ ವಿಜಯ ಸಾಧಿಸುತ್ತಿದ್ದಂತೆ ಹುಬ್ಬಳ್ಳಿಯ ವಿವಿಧ ಭಾಗಗಳಿಂದ ಅಭಿಮಾನಿಗಳು ಚೆನ್ನಮ್ಮ ವೃತ್ತದತ್ತ ಧಾವಿಸಿದ್ದಾರೆ. ಕೈಯಲ್ಲಿ ಆರ್‌ಸಿಬಿ ಧ್ವಜಗಳನ್ನು ಹಿಡಿದು ತಂಡದ ಪರ ಘೋಷಣೆಗಳನ್ನು ಕೂಗಿದ ಅಭಿಮಾನಿಗಳು, ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದ್ದಾರೆ.

ಗೆಲುವಿನ ಖುಷಿಯನ್ನು ಹಂಚಿಕೊಳ್ಳಲು ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ವಿತರಣೆ ಮಾಡಿ ಸಂಭ್ರಮಿಸಿದರು. ಚೆನ್ನಮ್ಮ ವೃತ್ತ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಭಾರೀ ಜನಸಂದಣಿ ಕಂಡುಬಂದಿದ್ದು, ಕೆಲಕಾಲ ಟ್ರಾಫಿಕ್‌ ಜಾಮ್‌ ಉಂಟಾಯಿತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿ ಪರಿಸ್ಥಿತಿಯನ್ನು ನಿಯಂತ್ರಣದಲ್ಲಿಟ್ಟಿದ್ದರು.

ಒಟ್ಟಾರೆ, ಆರ್‌ಸಿಬಿಯ ಚಾಂಪಿಯನ್ ಗೆಲುವು ಹುಬ್ಬಳ್ಳಿಯಲ್ಲಿ ಹಬ್ಬದ ವಾತಾವರಣವನ್ನು ಸೃಷ್ಟಿಸಿದ್ದು, ವರ್ಷಗಳ ನಿರೀಕ್ಷೆಗೆ ತೆರೆ ಬಿದ್ದ ಸಂತಸದಲ್ಲಿ ಅಭಿಮಾನಿಗಳು ತಡರಾತ್ರಿವರೆಗೂ ಸಂಭ್ರಮಾಚರಣೆಯಲ್ಲಿ ತೊಡಗಿದ್ದರು. ಆರ್‌ಸಿಬಿಯ ಈ ಐತಿಹಾಸಿಕ ಸಾಧನೆ ಅಭಿಮಾನಿಗಳ ಪಾಲಿಗೆ ಸ್ಮರಣೀಯ ಕ್ಷಣವಾಗಿ ಉಳಿದಿದೆ.

About The Author