Hubli News: ಸಾಮಾನ್ಯವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯಲ್ಲಿ ಕಾಣಿಸಿಕೊಳ್ಳುವ ಪೊಲೀಸ್ ಅಧಿಕಾರಿಯೊಬ್ಬರು, ರೈತರ ಹೋರಾಟದ ವೇದಿಕೆಯಲ್ಲಿ ಬಸವಣ್ಣನವರ ವಚನಗಳ ಮೂಲಕ ರೈತರ ಮಹತ್ವವನ್ನು ಸಾರಿದ ಅಪರೂಪದ ಕ್ಷಣವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹುಬ್ಬಳ್ಳಿಯ ಡಿಸಿಪಿ ರವೀಶ್ ಅವರ ಭಾಷಣಕ್ಕೆ ಸಾರ್ವಜನಿಕರಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಹುಬ್ಬಳ್ಳಿಯ ಹೆಸ್ಕಾಂ ಕಚೇರಿ ಎದುರು ನಡೆದ ರೈತರ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಡಿಸಿಪಿ ರವೀಶ್, ತಮ್ಮ ವಿಭಿನ್ನ ಮಾತುಗಳ ಮೂಲಕ ಎಲ್ಲರ ಗಮನ ಸೆಳೆದರು.
ಬಸವಣ್ಣನವರ ವಚನಗಳನ್ನು ಉಲ್ಲೇಖಿಸಿದ ಅವರು, ರೈತರ ಶ್ರಮ, ತ್ಯಾಗ ಮತ್ತು ಸಮಾಜ ನಿರ್ಮಾಣದಲ್ಲಿ ಅವರ ಪಾತ್ರವನ್ನು ಹೃದಯಸ್ಪರ್ಶಿಯಾಗಿ ವಿವರಿಸಿದರು.
ರೈತರ ಸಮಸ್ಯೆಗಳನ್ನು ಆಲಿಸುವುದರ ಜೊತೆಗೆ, ಅವರ ಸೇವೆಯನ್ನು ಗೌರವಿಸುವ ಮಾತುಗಳನ್ನಾಡಿದ ಡಿಸಿಪಿ ರವೀಶ್ ಅವರಿಗೆ ಪ್ರತಿಭಟನಾ ಸ್ಥಳದಲ್ಲೇ ರೈತರಿಂದ ಚಪ್ಪಾಳೆಗಳ ಸ್ವಾಗತ ದೊರೆಯಿತು.
ಪೊಲೀಸ್ ಅಧಿಕಾರಿಯೊಬ್ಬರು ಮಾನವೀಯತೆ ಮತ್ತು ಸಾಮಾಜಿಕ ಕಾಳಜಿಯೊಂದಿಗೆ ಮಾತನಾಡಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದ್ದು, ಭಾಷಣದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ಹರಿದಾಡುತ್ತಿದೆ.
“ಇಂತಹ ಅಧಿಕಾರಿಗಳು ಸಮಾಜಕ್ಕೆ ಮಾದರಿ” ಎಂದು ಹಲವರು ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್ ಮಾಡುತ್ತಿದ್ದು, ಡಿಸಿಪಿ ರವೀಶ್ ಅವರ ನಡೆಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.
ಕೇವಲ ಕಾನೂನು ಪಾಲನೆಗಷ್ಟೇ ಸೀಮಿತವಾಗದೇ, ಸಮಾಜದ ವಿವಿಧ ವರ್ಗಗಳೊಂದಿಗೆ ಬೆರೆಯುವ ಮೂಲಕ ಜನಸ್ನೇಹಿ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ಡಿಸಿಪಿ ರವೀಶ್ ಅವರ ಈ ಭಾಷಣ ಇದೀಗ ಜನಮನ ಗೆದ್ದಿದೆ.
ಕ್ಯಾಮೆರ ಪರ್ಸನ್ ಹೇಮಂತ್ ಜೊತೆ ಸಂಗಮೇಶ ಸತ್ತಿಗೇರಿ ಕರ್ನಾಟಕ ಟಿವಿ, ಹುಬ್ಬಳ್ಳಿ




