ಸಿಎಂ ಆಗಿ ಡಿ.ಕೆ.ಶಿವಕುಮಾರ್ ಪದಗ್ರಹಣ : ಅಭಿನಂಧಿಸಿ, ಅಭಿವೃದ್ಧಿಯೂ ಮುಖ್ಯ ಎಂದ ಆರ್.ಅಶೋಕ್

Political News: ರಾಜ್ಯದ ನೂತನ ಸಿಎಂ ಆಗಿ ಡಿ.ಕೆ.ಶಿವಕುಮಾರ್ ಅವರು ಪದಗ್ರಹಣ ಸ್ವೀಕರಿಸಿದ್ದು, ಎಲ್ಲಾ ರಾಜಕೀಯ ಗಣ್ಯರು ನೂತನ ಸಿಎಂಗೆ ಶುಭ ಕೋರಿದ್ದಾರೆ.

ಇದೇ ವೇಳೆ ಪ್ರತೀ ಬಾರಿ ಕಾಂಗ್ರೆಸ್ ವಿರುದ್ಧ ಖಾರವಾಗಿ ವಾಗ್ದಾಳಿ ನಡೆಸುತ್ತಿದ್ದ ಆರ್.ಅಶೋಕ್ ,ಈ ಬಾರಿ ನೂತನ ಸಿಎಂ ಡಿಕೆಶಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಅಭಿವೃದ್ಧಿ ರೂಡ ಮುಖ್ಯ ಎಂದಿದ್ದಾರೆ.

ಸೋಶಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಶುಭಕೋರಿರುವ ಅವರು, ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿರುವ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಅಭಿನಂದನೆಗಳು. ರಾಜ್ಯದ ಅಭಿವೃದ್ಧಿ ಮತ್ತು ಜನರ ಹಿತಕ್ಕಾಗಿ ಅವರು ಕೆಲಸ ಮಾಡಲಿ ಎಂದು ಹಾರೈಸುತ್ತೇನೆ. ಆದರೆ ಈ ಬದಲಾವಣೆಯಿಂದ ರಾಜ್ಯದ ಜನರಲ್ಲಿ ಯಾವುದೇ ಹೊಸ ನಿರೀಕ್ಷೆ ಮೂಡಿಲ್ಲ ಎಂಬುದು ಕಹಿ ಸತ್ಯ. ಕಳೆದ ಮೂರು ವರ್ಷಗಳಲ್ಲಿ ಭ್ರಷ್ಟಾಚಾರ, ವರ್ಗಾವಣೆ ದಂಧೆ, ಕಮಿಷನ್ ಸಂಸ್ಕೃತಿ ಮತ್ತು ಆಡಳಿತ ವೈಫಲ್ಯಗಳಿಂದ ರಾಜ್ಯವನ್ನು ಸಂಕಷ್ಟಕ್ಕೆ ತಳ್ಳಿದ ಸರ್ಕಾರದ ಮುಖ್ಯಸ್ಥರು ಮಾತ್ರ ಬದಲಾದಂತಿದೆ, ಮನಸ್ಥಿತಿ ಮತ್ತು ವ್ಯವಸ್ಥೆ ಬದಲಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ ಎಂದು ಅಶೋಕ್ ವ್ಯಂಗ್ಯವಾಡಿದ್ದಾರೆ.

ಜನರು ನಾಯಕತ್ವ ಬದಲಾವಣೆಗಿಂತ ಹೆಚ್ಚಾಗಿ ಆಡಳಿತದ ದಿಕ್ಕು ಬದಲಾಗುತ್ತದೆ, ಸರ್ಕಾರದ ಆದ್ಯತೆಗಳು ಬದಲಾಗುತ್ತವೆ ಎಂದು ನಿರೀಕ್ಷಿಸಿದ್ದರು. ಆದರೆ ಇಂದು ಸಚಿವ ಸಂಪುಟವನ್ನು ನೋಡಿದಾಗ, ಕರ್ನಾಟಕವನ್ನು ಈ ದುಸ್ಥಿತಿಗೆ ತಳ್ಳಿದ ಅದೇ ಹಳೆಯ ಭ್ರಷ್ಟ ಮುಖಗಳು ಮತ್ತೆ ಅಧಿಕಾರದ ಕೇಂದ್ರದಲ್ಲಿರುವುದು ಕಾಣುತ್ತಿದೆ. ರಾಜ್ಯವನ್ನು ಲೂಟಿ ಮಾಡಿದವರು, ಅಭಿವೃದ್ಧಿಯನ್ನು ಹಿಮ್ಮೆಟ್ಟಿಸಿದವರು ಮತ್ತು ಜನರ ವಿಶ್ವಾಸವನ್ನು ಕಳೆದುಕೊಂಡವರು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.

ಹೀಗಾಗಿ ಇದು ಹೊಸ ಸರ್ಕಾರವಲ್ಲ, ಹಳೆಯ ಸರ್ಕಾರದ ಹೊಸ ಮಾರುವೇಷ ಮಾತ್ರ ಎಂಬ ಭಾವನೆ ಜನರಲ್ಲಿ ಮೂಡಿರುವುದು ಆಶ್ಚರ್ಯದ ಸಂಗತಿಯಲ್ಲ. ಮುಖ್ಯಮಂತ್ರಿ ಬದಲಾಗುವುದರಿಂದಲೇ ರಾಜ್ಯದ ಪರಿಸ್ಥಿತಿ ಬದಲಾಗುವುದಿಲ್ಲ. ಭ್ರಷ್ಟಾಚಾರ, ಅಧಿಕಾರದ ದುರುಪಯೋಗ ಮತ್ತು ಜನವಿರೋಧಿ ರಾಜಕಾರಣವನ್ನು ಬದಿಗೊತ್ತಿ, ಶ್ರೀಸಾಮಾನ್ಯರ ಪರವಾದ ಜನಸ್ನೇಹಿ ಸರ್ಕಾರ ನೀಡುವ ಇಚ್ಛಾಶಕ್ತಿ ಇದ್ದಾಗ ಮಾತ್ರ ಬದಲಾವಣೆ ಸಾಧ್ಯ ಎಂದು ಆರ್.ಅಶೋಕ್ ಹೇಳಿದ್ದಾರೆ.

ರಾಜ್ಯದ ಜನತೆ ಈಗ ಭರವಸೆಗಳಿಗಿಂತ ಫಲಿತಾಂಶಗಳನ್ನು ನೋಡಲು ಬಯಸುತ್ತಿದ್ದಾರೆ. ಮಾತುಗಳಿಗಿಂತ ಕಾರ್ಯವನ್ನು, ಪ್ರಚಾರಕ್ಕಿಂತ ಆಡಳಿತವನ್ನು ನಿರೀಕ್ಷಿಸುತ್ತಿದ್ದಾರೆ. ನೂತನ ಮುಖ್ಯಮಂತ್ರಿಗಳ ಮುಂದೆ ಈಗ ನಿಂತಿರುವುದು ಅವಕಾಶಗಳ ಪರ್ವತವಲ್ಲ; ತಮ್ಮದೇ ಸರ್ಕಾರದ ಮೂರು ವರ್ಷಗಳ ವೈಫಲ್ಯಗಳ ಅವಶೇಷಗಳು.

ಕಳೆದ ಮೂರು ವರ್ಷಗಳ ಭ್ರಷ್ಟಾಚಾರ, ಆಡಳಿತ ವೈಫಲ್ಯ ಮತ್ತು ಮುರಿದ ಭರವಸೆಗಳ ಕರಿನೆರಳು ಅವರನ್ನು ಪ್ರತಿ ಹೆಜ್ಜೆಯಲ್ಲೂ ಹಿಂಬಾಲಿಸಲಿದೆ. ಕಳೆದ ಮೂರು ವರ್ಷಗಳಲ್ಲಿ ತಮ್ಮದೇ ಪಕ್ಷದ ಸರ್ಕಾರ ಬಿತ್ತಿರುವ ಮುಳ್ಳುಗಳ ಮೇಲೆಯೇ ಅವರು ಆಡಳಿತದ ಪಯಣ ಆರಂಭಿಸಬೇಕಾಗಿದೆ ಎಂದು ಆರ್.ಅಶೋಕ್ ಹೇಳಿದ್ದಾರೆ.

ಕುಸಿದ ಆಡಳಿತದ ಅವಶೇಷಗಳ ಮೇಲೆ ಹೊಸ ಸರ್ಕಾರ ಕಟ್ಟುವುದು ಸುಲಭವಲ್ಲ. ಮುಖ್ಯಮಂತ್ರಿ ಬದಲಾಗಿರಬಹುದು, ಆದರೆ ಕರ್ನಾಟಕದ ಜನತೆ ಕಳೆದ ಮೂರು ವರ್ಷಗಳ ಕಹಿ ನೆನಪನ್ನು ಇನ್ನೂ ಮರೆತಿಲ್ಲ ಮತ್ತು ಮುಖ್ಯಸ್ಥರು ಮಾತ್ರ ಬದಲಾದ ಈ ಹೊಸ ಸರ್ಕಾರದಿಂದ ಕನ್ನಡಿಗರು ಯಾವುದೇ ಹೆಚ್ಚಿನ ನಿರೀಕ್ಷೆಯನ್ನೂ ಇಟ್ಟುಕೊಂಡಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.

About The Author