Political News: ಎಲ್ಲರಿಗೂ ನನ್ನ ಮನೆ ಬಾಗಿಲು ತೆರೆದಿದೆ: ಹುಟ್ಟೂರಿನ ಜನರಿಗೆ ಧನ್ಯವಾದ ತಿಳಿಸಿದ ಸಿಎಂ

Political News: ಸಿಎಂ ಆದ ಬಳಿಕ ಡಿ.ಕೆ.ಶಿವಕುಮಾರ್ ಅವರು ಕನಕಪುರ ಸೇರಿ ಸುತ್ತಮುತ್ತಲಿನ ಹಲವು ಹಳ್ಳಿಗಳಿಗೆ ಭೇಟಿ ನೀಡಿದ್ದರು.

ಈ ವೇಳೆ ತಮ್ಮ ಹುಟ್ಟೂರಾದ ದೊಡ್ಡ ಆಲದಹಳ್ಳಿಗೂ ಭೇಟಿ ನೀಡಿದ್ದು, ಅಲ್ಲಿನ ಜನರಿಗೆ ಧನ್ಯವಾದ ಸಲ್ಲಿಸಿದ್ದಾರೆ. ನಾನು ಸಿಎಂ ಆದರೂ ನಿಮ್ಮ ಊರಿನ ಮಗ, ನಿಮ್ಮ ಕುಟುಂಬದ ಸದಸ್ಯ. ದೊಡ್ಡ ಆಲಹಳ್ಳಿಯ ರೈತರ ಮಗನಾಗಿ ಹುಟ್ಟಿ, ಇಂದು ಮುಖ್ಯಮಂತ್ರಿಯಾಗಿ ತವರಿಗೆ ಕಾಲಿಟ್ಟಿದ್ದು ನನ್ನ ಜೀವನದಲ್ಲಿ ಎಂದಿಗೂ ಮರೆಯಲಾರದ ದಿನ. ಹುಟ್ಟೂರಿನ ನಂಟು, ಪ್ರೀತಿ, ಬೆಂಬಲ ನನ್ನನ್ನು ಶಕ್ತಿಸೌಧದ ಉನ್ನತ ಸ್ಥಾನದವರೆಗೆ ಕೊಂಡೊಯ್ದಿದೆ. ಜೀವನದ ಪ್ರತಿ ಹಂತದಲ್ಲಿಯೂ ನನ್ನೊಂದಿಗಿದ್ದು ಬೆಳೆಸಿದ, ನನ್ನವರಿಗೆ ಸಾಷ್ಟಾಂಗ ನಮಸ್ಕಾರಗಳು ಎಂದು ಸಿಎಂ ಹೇಳಿದ್ದಾರೆ.

ದೊಡ್ಡ ಆಲಹಳ್ಳಿಯ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ದಿನ. ನಾನು ನಿಮ್ಮ ಮಗ, ನಿಮ್ಮ ಸಹೋದರ, ನಿಮ್ಮ ಬಂಧು. ದೊಡ್ಡ ಆಲಹಳ್ಳಿಯ ಕೆಂಪೇಗೌಡ ಶಿವಕುಮಾರ್‌ ಎಂದು ನಾನು ಪ್ರಮಾಣವಚನ ಸ್ವೀಕರಿಸಿದೆ. ಆ ಗೌರವ ಇಡೀ ರಾಜ್ಯಕ್ಕೆ, ಕನಕಪುರಕ್ಕೆ ಹಾಗೂ ದೊಡ್ಡ ಆಲಹಳ್ಳಿಗೆ ಸೇರುತ್ತದೆ ಎಂದು ಸಿಎಂ ಡಿಕೆಶಿ ಹೇಳಿದ್ದಾರೆ.

ಸಾತನೂರು ಹೋಬಳಿಯ ಜನರಿಗೆ ಇಂದು ಸಂತಸದ ದಿನ. ನನ್ನನ್ನು ಬೆಳೆಸಿ ರಾಜ್ಯದ ಮುಖ್ಯಮಂತ್ರಿಯನ್ನಾಗಿ ಮಾಡಿರುವ ನಿಮಗೆ ಕೋಟಿ ನಮಸ್ಕಾರಗಳು. ನನ್ನನ್ನು ಬೆಳೆಸಿದ ಹಿರಿಯ ನಾಯಕರು ಇಂದು ಬದುಕಿರುತ್ತಿದ್ದರೆ, ಎಷ್ಟೋ ಸಂತಸಪಡುತ್ತಿದ್ದರು. ಪ್ರತಿ ಹಂತದಲ್ಲೂ ನನಗೆ ಶಕ್ತಿ, ಧೈರ್ಯ ತುಂಬಿ ಬೆಳೆಸಿದ ಅವರನ್ನು ನಾನು ಎಂದಿಗೂ ಮರೆಯುವುದಿಲ್ಲ.

ನಾನು ಈ ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿಗೆ ನಿಮ್ಮ ಕಣ್ಣುಗಳೇ ಸಾಕ್ಷಿ. ರಸ್ತೆ ಅಗಲೀಕರಣ, ವಿದ್ಯುತ್‌ ವ್ಯವಸ್ಥೆ, ಕೆರೆಗಳಿಗೆ ನೀರು ಹರಿಸುವುದು, ಕಬ್ಬಾಳಮ್ಮನ ದೇವಸ್ಥಾನ ಅಭಿವೃದ್ಧಿ ಸೇರಿದಂತೆ ಹಲವು ಮೂಲಸೌಕರ್ಯಗಳನ್ನು ಒದಗಿಸಲಾಗಿದೆ. ಇದೇ ರೀತಿ ಕೊನೆಯವರೆಗೂ ನಿಮ್ಮ ಸೇವೆ ಮಾಡಲು ನಾನು ಸಿದ್ಧನಿದ್ದೇನೆ ಎಂದು ಸಿಎಂ ಹೇಳಿದ್ದಾರೆ.

ನಿಮ್ಮ ಪ್ರಾರ್ಥನೆ, ಆಶೀರ್ವಾದದಿಂದ ನಾನು ಮುಖ್ಯಮಂತ್ರಿಯಾಗಿದ್ದೇನೆ. 2028ರಲ್ಲೂ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸೋಣ. ನನ್ನ ಮನೆ ಬಾಗಿಲು ಎಲ್ಲಾ ಪಕ್ಷದವರಿಗೂ ತೆರೆದಿದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳೋಣ. ನಾನು ಎಲ್ಲರಿಗೂ ಮುಖ್ಯಮಂತ್ರಿ. ಎಲ್ಲರೂ ಒಗ್ಗಟ್ಟಿನಿಂದ ಅಭಿವೃದ್ಧಿಯತ್ತ ಸಾಗೋಣ. ಬಲಿಷ್ಠ ಕರ್ನಾಟಕಕ್ಕಾಗಿ… ಭರವಸೆಯ ಹೆಜ್ಜೆಯಿಡೋಣ ಎಂದು ಸಿಎಂ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ.

About The Author