Political News: ನಂದಿನಿ ಬೆಣ್ಣೆ-ತುಪ್ಪದ ಬೆಲೆ ಏರಿಕೆ: ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ

Political News: ರಾಜ್ಯದಲ್ಲಿ ನಂದಿನಿ ತುಪ್ಪ ಮತ್ತು ಬೆಣ್ಣೆ ಬೆಲೆ ಹೆಚ್ಚಾಗಿದ್ದು, ಈ ಬಗ್ಗೆ ವಿಪಕ್ಷ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಕಿಡಿಕಾರಿರುವ ಸಿ.ಟಿ.ರವಿ, ಪ್ರಜೆಗಳ ಜೇಬಿಗೆ ಕತ್ತರಿ ಹಾಕುವುದೇ ಕಾಂಗ್ರೆಸ್ ಸರ್ಕಾರದ ಏಕೈಕ ಗುರಿ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ರಾಜ್ಯದ ಬೊಕ್ಕಸವನ್ನು ಬರಿದಾಗಿಸಿದ ಕಾಂಗ್ರೆಸ್ ಸರ್ಕಾರ, ಬಲಗೈಯಲ್ಲಿ ಕೊಟ್ಟು, ಎಡಗೈಯಲ್ಲಿ ಕಿತ್ತುಕೊಂಡಂತೆ ಮಾಡುತ್ತಿದೆ. ಗ್ಯಾರಂಟಿ ಹೆಸರಲ್ಲಿ ಅಧಿಕಾರಕ್ಕೆ ಬಂದು, ಪ್ರತಿಯೊಂದು ವಸ್ತುವಿನ ಬೆಲೆಯನ್ನೂ ವಿಪರೀತವಾಗಿ ಏರಿಸಿರುವುದೇ ಈ ಸರ್ಕಾರದ ಸಾಧನೆ. ಇದಕ್ಕೆ ನಂದಿನಿ ತುಪ್ಪ – ಬೆಣ್ಣೆ ಇನ್ನೊಂದು ಸೇರ್ಪಡೆಯಷ್ಟೇ ಎಂದು ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಂದಿನಿ ಹಾಲು – ಮೊಸರಿನ ದರವನ್ನು ಈಗಾಗಲೇ 9 ರೂಪಾಯಿ ಹೆಚ್ಚಿಸಿ, ಬಡ ಜನರು ಹಾಲು ಖರೀದಿಸಲೇ ಹಿಂದೇಟು ಹಾಕುವಂತೆ ಮಾಡಲಾಗಿದೆ. ಈಗ ನಂದಿನಿ ತುಪ್ಪ ಮತ್ತು ಬೆಣ್ಣೆಯ ದರವೂ ಕೈಗೆಟುಕದಂತಾಗಿದೆ. ಹಾಲಿನ ದರ ಏರಿಸಿದಾಗ ಅದರ ಪ್ರಯೋಜನ ರೈತರಿಗೆ ನೀಡುತ್ತೇವೆ ಎಂದು ಸುಳ್ಳು ಹೇಳಿದಿರಿ. ಈಗ ತುಪ್ಪ – ಬೆಣ್ಣೆಯ ದರ ಏರಿಕೆ ಯಾರ ಹಿತ ಕಾಯಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ? ಗ್ಯಾರಂಟಿ ಹೆಸರಲ್ಲಿ ಜನರ ಮೂಗಿಗೆ ಇನ್ನಷ್ಟು ದಿನ ತುಪ್ಪ ಸವರುತ್ತೀರಿ? ಎಂದು ಸಿ.ಟಿ.ರವಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಇನ್ನು ಕಾರ್ಕಳ ಶಾಸಕ ಸುನೀಲ್ ಕುಮಾರ್ ಕೂಡ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ರಾಜ್ಯದ ಜನರಿಗೆ ಮತ್ತೊಂದು ಬೆಲೆ ಏರಿಕೆಯ ಹೊರೆ ಬಿದ್ದಿದೆ. ಈಗ ನಂದಿನಿ ತುಪ್ಪ ಹಾಗೂ ಬೆಣ್ಣೆಯ ದರವನ್ನು ಹೆಚ್ಚಿಸುವ ಮೂಲಕ ಕಾಂಗ್ರೆಸ್ ಸರ್ಕಾರ ಮತ್ತೆ ಜನಸಾಮಾನ್ಯರ ಜೇಬಿಗೆ ಕತ್ತರಿ ಹಾಕಿದೆ. ಜನರ ಮೇಲೆ ಬೆಲೆ ಏರಿಕೆಯ ಬಂಡೆ ನಿರಂತರವಾಗಿ ಬೀಳುತ್ತಿದೆ. ಈ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಒಂದರ ಹಿಂದೆ ಒಂದರಂತೆ ಬೆಲೆ ಏರಿಕೆಗಳ ಸರಮಾಲೆಯನ್ನೇ ಕಾಣುತ್ತಿದ್ದೇವೆ ಎಂದು ಸುನೀಲ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್‌ಗೆ ₹4 ಹೆಚ್ಚಿಸಲಾಯಿತು.  ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ಪ್ರಯಾಣ ದರವನ್ನು ಸುಮಾರು 15% ಹೆಚ್ಚಿಸಲಾಯಿತು.  ವಿದ್ಯುತ್ ದರವನ್ನು ಪ್ರತಿ ಯೂನಿಟ್‌ಗೆ ಸರಾಸರಿ ₹2.89ರವರೆಗೆ ಹೆಚ್ಚಿಸಲಾಯಿತು.  ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ಸುಂಕದಿಂದ ಅದರ ಬೆಲೆಯೂ ಏರಿಕೆಯಾಯಿತು.  ಈಗ ನಂದಿನಿ ತುಪ್ಪ ಮತ್ತು ಬೆಣ್ಣೆಯ ಬೆಲೆಯೂ ಹೆಚ್ಚಳವಾಗಿದೆ.

ಒಂದೆಡೆ ಗೃಹಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆ, ಮತ್ತೊಂದೆಡೆ ತೆರಿಗೆ ಮತ್ತು ಸೇವಾ ಶುಲ್ಕಗಳ ಹೆಚ್ಚಳ—ಇವೆಲ್ಲವೂ ಮಧ್ಯಮ ವರ್ಗ ಹಾಗೂ ಬಡ ಕುಟುಂಬಗಳ ಬದುಕನ್ನು ಇನ್ನಷ್ಟು ದುಬಾರಿಯಾಗಿಸುತ್ತಿವೆ. ಚುನಾವಣೆಗೆ ಮುನ್ನ “ಜನಪರ ಆಡಳಿತ”ದ ಭರವಸೆ ನೀಡಿದ್ದ ಕಾಂಗ್ರೆಸ್ ಸರ್ಕಾರ, ಅಧಿಕಾರಕ್ಕೆ ಬಂದ ನಂತರ “ಬೆಲೆ ಏರಿಕೆಯ ಸರ್ಕಾರ” ಎಂಬ ಹೆಸರನ್ನೇ ಗಳಿಸುತ್ತಿದೆ. ರೈತರ ಹಿತವನ್ನು ಕಾಪಾಡುವುದೂ ಮುಖ್ಯ, ಆದರೆ ಅದರ ಸಂಪೂರ್ಣ ಹೊರೆ ಗ್ರಾಹಕರ ಮೇಲೆ ಹಾಕುವುದು ಸಮರ್ಥನೀಯವಲ್ಲ. ಕಾಂಗ್ರೆಸ್ ಸರ್ಕಾರ ಕೂಡಲೇ ಈ ನಿರಂತರ ಬೆಲೆ ಏರಿಕೆಗಳ ಬಗ್ಗೆ ಮರುಪರಿಶೀಲನೆ ನಡೆಸಿ, ಜನಸಾಮಾನ್ಯರ ಹಿತವನ್ನು ಮೊದಲ ಆದ್ಯತೆಯಾಗಿ ಪರಿಗಣಿಸಬೇಕು ಎಂದು ಸುನೀಲ್ ಕುಮಾರ್ ಆಗ್ರಹಿಸಿದ್ದಾರೆ.

About The Author