Political News: ಇದು ಬ್ರ್ಯಾಂಡ್ ಬೆಂಗಳೂರು ಅಲ್ಲ, ಬ್ರೋಕನ್ ಬೆಂಗಳೂರು: ಆರ್.ಅಶೋಕ್ ವ್ಯಂಗ್ಯ

Political News: ಕೃಷ್ಣಭೈರೇಗೌಡರು ತಮಗೆ ನಗರಾಭಿವೃದ್ಧಿ ಖಾತೆ ಬೇಡವೆಂದು ಹೇಳಿ ಅಸಮಾಧಾನ ವ್ಯಕ್ತಪಡಿಸಿದ್ದು, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆ ತೀವ್ರವಾಗಿದೆ.

ಈ ಮಧ್ಯೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಬ್ರ್ಯಾಂಡ್ ಬೆಂಗಳೂರು ಅಭಿವೃದ್ಧಿ ಬಗ್ಗೆ ವ್ಯಂಗ್ಯವಾಡಿದ್ದಾರೆ. ಬ್ರ್ಯಾಂಡ್ ಬೆಂಗಳೂರು’ ಅಲ್ಲ, ಇದು ಡಿ.ಕೆ.ಶಿವಕುಮಾರ್ ಹಾಗೂ ಕೃಷ್ಣ ಬೈರೇಗೌಡರ ಜುಗಲ್‌ಬಂದಿಯ “ಬ್ರೋಕನ್ ಬೆಂಗಳೂರು’!* ಎಂದಿದ್ದಾರೆ.

ನಗರಕ್ಕೆ ಮುಂಗಾರು ಮಳೆ ಕಾಲಿಟ್ಟಿದ್ದೇ ತಡ, ಸಿಲಿಕಾನ್ ಸಿಟಿಯ ಅಸಲಿ ಬಣ್ಣ ಬಯಲಾಗಿದೆ. ಒಂದೆಡೆ ರಸ್ತೆ ತುಂಬಾ ಬಿದ್ದಿರುವ 5,000ಕ್ಕೂ ಅಧಿಕ ಮೃತ್ಯುಕೂಪಗಳು, ಇನ್ನೊಂದೆಡೆ ಕಣ್ಣು ಹಾಯಿಸಿದಲ್ಲೆಲ್ಲಾ ನಾರುತ್ತಿರುವ ಕಸದ ರಾಶಿ!

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೇ, ಇಲಾಖೆಗಳ ಹಂಚಿಕೆಯ ಜಿದ್ದಾಜಿದ್ದಿನಲ್ಲಿ ಕೊನೆಗೂ ಒಲ್ಲದ ಮನಸ್ಸಿನಿಂದ ಸಚಿವ ಕೃಷ್ಣಭೈರೇಗೌಡ ಅವರಿಗೆ ಬೆಂಗಳೂರಿನ ಜವಾಬ್ದಾರಿ ಕಟ್ಟಿದ್ದೀರಿ. ಆದರೆ ಕಂದಾಯ ಇಲಾಖೆಯನ್ನು ಬಿಡಲು ಮನಸಿಲ್ಲದ ಸಚಿವ ಕೃಷ್ಣ ಭರೇಗೌಡ ಅವರಿಗೆ ಬೆಂಗಳೂರಿನ ನಗರದ ಜನರ ಜೀವಕ್ಕಿಂತ, BDA, BMRDA ಇಲ್ಲದ “ನೀರಸ” ಬೆಂಗಳೂರು ಅಭಿವೃದ್ಧಿ ಖಾತೆಯ ಮೇಲಿನ ಅಸಮಾಧಾನವೇ ದೊಡ್ಡದಾದಂತಿದೆ! ಎಂದು ರಾಜ್ಯ ರಾಜಕಾರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದ ಇಂದಿನ ಭೀಕರ ವಾಸ್ತವ ಇಲ್ಲಿದೆ ನೋಡಿ: 5,000ಕ್ಕೂ ಹೆಚ್ಚು ರಸ್ತೆ ಗುಂಡಿಗಳು: ಮಳೆಗಾಲ ಶುರುವಾದರೂ ಕೇವಲ 20% ಕಾಮಗಾರಿ ಮಾತ್ರ ಪೂರ್ಣಗೊಂಡಿದೆ. ಬಾಕಿ 80% ಕಾಮಗಾರಿ ಇನ್ನೂ ನೆನೆಗುದಿಗೆ ಬಿದ್ದಿದೆ! ಬೈಕ್ ಸವಾರರು ರಸ್ತೆಗೆ ಇಳಿದರೆ ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾಗಿದೆ. ಈ ಗುಂಡಿಗಳಿಗೆ ಬೀಳುವ ಬಡವರ ಜೀವಕ್ಕೆ ಯಾರು ಹೊಣೆ? ಎಂದು ಆರ್.ಅಶೋಕ್ ತಮ್ಮ ಎಕ್ಸ್ ಖಾತೆಯಲ್ಲಿ ಪ್ರಶ್ನಿಸಿದ್ದಾರೆ.

ನಾರುತ್ತಿರುವ ನಗರ: ಕಂಡ ಕಂಡಲ್ಲಿ ಕಸದ ರಾಶಿ ಬಿದ್ದಿದೆ, ವಿಲೇವಾರಿ ಮಾಡಲು GBAಗೆ ಯೋಗ್ಯತೆಯಿಲ್ಲ. ಮಳೆ ನೀರಿಗೆ ಈ ಕಸ ಕೊಳೆತು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ. ಸ್ವಚ್ಛಗೊಳಿಸಬೇಕಾದ ಸಿಬ್ಬಂದಿಯೇ ಕಸವನ್ನು ರಸ್ತೆ ಮಧ್ಯೆ ಸುರಿಯುತ್ತಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗುತ್ತಿದ್ದರೂ ಇಲಾಖೆ ಕುರುಡಾಗಿದೆಯೇ?

ವಿಟ್ಟಸಂದ್ರದಲ್ಲಿ ಕಸದ ಯಾತನೆ:ಯಾವುದೇ ಮುಂಜಾಗ್ರತೆಯಿಲ್ಲದೆ ವಿಟ್ಟಸಂದ್ರದಲ್ಲಿ ಕಸ ವರ್ಗಾವಣೆ ಕೇಂದ್ರ ಸ್ಥಾಪಿಸಲು ಮುಂದಾಗಿ ಸ್ಥಳೀಯ ಜನರನ್ನು ನರಕಕೂಪಕ್ಕೆ ತಳ್ಳಲಾಗುತ್ತಿದೆ!

ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ನಮ್ಮ ನೇರ ಪ್ರಶ್ನೆಗಳು: ಮುಖ್ಯಮಂತ್ರಿಗಳೇ, ಬೆಂಗಳೂರಿಗೆ ₹2,000 ಕೋಟಿ ಬಿಡುಗಡೆ ಮಾಡಿದ್ದೇವೆ ಎಂದು ಕೊಚ್ಚಿಕೊಳ್ಳುತ್ತಿದ್ದೀರಲ್ಲ, ಆ ಸಾವಿರಾರು ಕೋಟಿ ಹಣ ಯಾರ ಜೇಬು ಸೇರಿದೆ? ರಸ್ತೆಗಳೇಕೆ ಇನ್ನೂ ಮೃತ್ಯು ಕೂಪಗಳಾಗೋಯೇ ಉಳಿದಿವೆ?

ನೂತನ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡರೇ.. ನಿಮಗೆ ಇಷ್ಟವಿಲ್ಲದಿದ್ದರೆ ಖಾತೆ ಬಿಟ್ಟು ರಾಜೀನಾಮೆ ಕೊಡಿ, ಅದನ್ನು ಬಿಟ್ಟು ಬೆಂಗಳೂರಿನ 1.5 ಕೋಟಿ ನಾಗರಿಕರನ್ನು ನಿಮ್ಮ ಅಸಮಾಧಾನಕ್ಕೆ ಬಲಿ ಕೊಡಬೇಡಿ! ಎಂದು ಆರ್.ಅಶೋಕ್ ಕಿಡಿಕ್ಾರಿದ್ದಾರೆ.

ಅಧಿಕಾರ ಸಿಕ್ಕ ತಕ್ಷಣ ಬರೀ ಕಮಿಷನ್ ದಂಧೆ, ವರ್ಗಾವಣೆ ದಂಧೆಯಲ್ಲಿ ಮುಳುಗಿರುವ ಈ ಸರ್ಕಾರಕ್ಕೆ ಬೆಂಗಳೂರಿನ ಬ್ರಾಂಡ್ ಇಮೇಜ್ ಸಂಪೂರ್ಣವಾಗಿ ಮಣ್ಣುಪಾಲು ಮಾಡಲು ಹೊರಟಿದೆ. ತಕ್ಷಣವೇ ಯುದ್ಧೋಪಾದಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿ, ಕಸದ ಸಮಸ್ಯೆಯನ್ನು ಬಗೆಹರಿಸದಿದ್ದರೆ, ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಉಗ್ರ ಹೋರಾಟ ಮಾಡುವುದು ಖಚಿತ! ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

About The Author