Hubli News: ಹುಬ್ಬಳ್ಳಿಯಲ್ಲಿ ಮತ್ತೊಂದು ಬಾರಿ ಮನೆ ಕಳ್ಳತನ ಪ್ರಕರಣ ಬೆಳಕಿಗೆ ಬಂದಿದೆ. ಕೇಶ್ವಾಪುರ ಪೊಲೀಸ್ ಠಾಣೆ ಸಮೀಪದ ನವೀನ್ ಪಾರ್ಕ್ ಪ್ರದೇಶದಲ್ಲಿರುವ ಪ್ರತಿಷ್ಠಿತ ಹೋಟೆಲ್ ಉದ್ಯಮಿ ಬಾಲಕೃಷ್ಣ ಶೆಟ್ಟಿ ಅವರ ಮನೆಯಲ್ಲಿ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ನಗದು ಹಣ ದೋಚಿ ಪರಾರಿಯಾಗಿದ್ದಾರೆ.
ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸ್ ಠಾಣೆ ಕೂಗಳತೆಯಲ್ಲೇ ಭಾರಿ ಮನೆ ಕಳ್ಳತನ ನಡೆದಿದ್ದು, ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ನವೀನ್ ಪಾರ್ಕ್ ಪ್ರದೇಶದಲ್ಲಿರುವ ಹೋಟೆಲ್ ಉದ್ಯಮಿ ಬಾಲಕೃಷ್ಣ ಶೆಟ್ಟಿ ಅವರ ಮನೆಗೆ ನುಗ್ಗಿದ ಕಳ್ಳರು ಸುಮಾರು 50 ಲಕ್ಷ ರೂಪಾಯಿ ಮೌಲ್ಯದ ಬಂಗಾರ ಹಾಗೂ 6 ಲಕ್ಷ ರೂಪಾಯಿ ನಗದು ಹಣ ಕಳವು ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕುಟುಂಬದವರು ಮಗಳ ಕಾಲೇಜು ದಾಖಲಾತಿ ಕಾರ್ಯಕ್ಕಾಗಿ ಬೆಂಗಳೂರಿಗೆ ತೆರಳಿದ್ದರಿಂದ ಕಳೆದ ಎರಡು ದಿನಗಳಿಂದ ಮನೆಗೆ ಬೀಗ ಹಾಕಲಾಗಿತ್ತು. ಈ ವೇಳೆ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿದ ಕಳ್ಳರು ಮನೆಗೆ ನುಗ್ಗಿ ಕಳ್ಳತನ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕಿಸಿದ್ದಾರೆ.
ಕಳ್ಳತನದ ವಿಚಾರ ತಿಳಿಯುತ್ತಿದ್ದಂತೆಯೇ ಕೇಶ್ವಾಪುರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸಾಕ್ಷ್ಯ ಸಂಗ್ರಹ ಕಾರ್ಯ ಕೈಗೊಂಡಿದ್ದಾರೆ.
ಕಳ್ಳರ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಮುಂದುವರಿದಿದೆ. ಪ್ರಕರಣ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.




