Hubli News: ಹುಬ್ಬಳ್ಳಿಯ ನವನಗರದಲ್ಲಿರುವ ಪೊಲೀಸ್ ಕಮಿಷನರ್ ಕಚೇರಿ ಎದುರಿನ ರಾಷ್ಟ್ರೀಯ ಹೆದ್ದಾರಿ ಹಾಗೂ ಬಿಆರ್ಟಿಎಸ್ ಕಾರಿಡಾರ್ನಲ್ಲಿ ಅಳವಡಿಸಿರುವ ಬ್ಯಾರಿಕೇಡ್ಗಳು ವಾಹನ ಸಂಚಾರಕ್ಕೆ ತೊಡಕಾಗಿವೆ ಎಂಬ ಆರೋಪ ಕೇಳಿಬಂದಿದೆ. ಬ್ಯಾರಿಕೇಡ್ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸುವಂತೆ ವಾಹನ ಸವಾರರು ಆಗ್ರಹಿಸಿದ್ದಾರೆ.
ನವನಗರದ ಪೊಲೀಸ್ ಕಮಿಷನರ್ ಕಚೇರಿ ಎದುರಿನ ಹುಬ್ಬಳ್ಳಿ-ಧಾರವಾಡ ರಾಷ್ಟ್ರೀಯ ಹೆದ್ದಾರಿ ಹಾಗೂ ಬಿಆರ್ಟಿಎಸ್ ಕಾರಿಡಾರ್ನಲ್ಲಿ ಕೆಲ ದಿನಗಳ ಹಿಂದೆ ಬ್ಯಾರಿಕೇಡ್ ಅಳವಡಿಸಲಾಗಿದೆ.
ಅಪಘಾತಗಳನ್ನು ತಡೆಗಟ್ಟುವ ಉದ್ದೇಶದಿಂದ ಬ್ಯಾರಿಕೇಡ್ ಅಳವಡಿಸಲಾಗಿದ್ದರೂ, ಇದೀಗ ಅವು ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗಿವೆ ಎಂಬ ದೂರುಗಳು ಕೇಳಿಬರುತ್ತಿವೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಎರಡು ಹಾಗೂ ಬಿಆರ್ಟಿಎಸ್ ಕಾರಿಡಾರ್ನಲ್ಲಿ ಮೂರು ಬ್ಯಾರಿಕೇಡ್ ಅಳವಡಿಸಿರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗಿದ್ದು, ವಾಹನ ಸವಾರರು ಮತ್ತು ಚಿಗರಿ ಬಸ್ ಚಾಲಕರು ಸಮಸ್ಯೆ ಎದುರಿಸುತ್ತಿದ್ದಾರೆ.
ಕಾನೂನು ವಿಶ್ವವಿದ್ಯಾಲಯ ಬಸ್ ನಿಲ್ದಾಣದಿಂದ ಕಮಿಷನರ್ ಕಚೇರಿವರೆಗೆ ವಾಹನಗಳ ಸಾಲು ಕಂಡುಬರುತ್ತಿದ್ದು, ಪೀಕ್ ಅವಧಿಯಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗುತ್ತಿದೆ.
ಇನ್ನೊಂದೆಡೆ, ಬಿಆರ್ಟಿಎಸ್ ಕಾರಿಡಾರ್ನಲ್ಲಿ ಜಿಗ್-ಜಾಗ್ ಮಾದರಿಯಲ್ಲಿ ಬ್ಯಾರಿಕೇಡ್ ಅಳವಡಿಸಿರುವುದರಿಂದ ಚಿಗರಿ ಬಸ್ಗಳ ಸಂಚಾರಕ್ಕೂ ಅಡ್ಡಿಯಾಗುತ್ತಿದೆ ಎಂದು ಜನರು ಆರೋಪಿಸಿದ್ದಾರೆ.
ಅಪಘಾತ ತಡೆ ಹೆಸರಿನಲ್ಲಿ ಬ್ಯಾರಿಕೇಡ್ ಅಳವಡಿಸುವ ಬದಲು ಸಂಚಾರ ನಿಯಮಗಳ ಕಟ್ಟುನಿಟ್ಟಿನ ಪಾಲನೆಗೆ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಸಂಚಾರ ದಟ್ಟಣೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಿ, ವಾಹನಗಳ ಸುಗಮ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.




