Hubli News: ಬಾಲ್ಯದಲ್ಲಿ ಶಾಲಾ ಶುಲ್ಕ ಕಟ್ಟಿದ ಗುರುವಿಗೆ ಕಾಣಿಕೆಯಾಗಿ ಕಾರು ಗಿಫ್ಟ್ ನೀಡಿದ ಶಿಷ್ಯ

Hubli News: ಬಾಲ್ಯದಲ್ಲಿ ಶಾಲಾ ಶುಲ್ಕ ಕಟ್ಟಿ ಶಿಕ್ಷಣ ಮುಂದುವರಿಸಲು ನೆರವಾಗಿದ್ದ ಶಿಕ್ಷಕರಿಗೆ ಕೃತಜ್ಞತೆಯ ಕಾಣಿಕೆಯಾಗಿ ಹಳೆಯ ವಿದ್ಯಾರ್ಥಿಯೊಬ್ಬ ಹೊಸ ಕಾರನ್ನು ಉಡುಗೊರೆಯಾಗಿ ನೀಡಿರುವ ಭಾವನಾತ್ಮಕ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.

ಗುರು-ಶಿಷ್ಯರ ಬಾಂಧವ್ಯಕ್ಕೆ ಹೊಸ ಅರ್ಥ ನೀಡುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಹಾನಗಲ್‌ನ ಕುಮಾರೇಶ್ವರ ಪ್ರೌಢಶಾಲೆಯ ನಿವೃತ್ತ ಶಿಕ್ಷಕ ಸಿ.ಎಸ್. ವಸ್ತ್ರದ್ ಅವರಿಗೆ ಅವರ ಹಳೆಯ ವಿದ್ಯಾರ್ಥಿ ನವೀನ್ ಹುಲಿಹಳ್ಳಿ ಹೊಸ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.

2007ರ ಎಸ್‌ಎಸ್‌ಎಲ್‌ಸಿ ಬ್ಯಾಚ್‌ನ ವಿದ್ಯಾರ್ಥಿಯಾಗಿದ್ದ ನವೀನ್, ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟದ ನಡುವೆ ಶಿಕ್ಷಣ ಮುಂದುವರಿಸಲು ಹರಸಾಹಸ ಪಡುತ್ತಿದ್ದರು. ಈ ಸಂದರ್ಭದಲ್ಲಿ ಶಿಕ್ಷಕ ವಸ್ತ್ರದ್ ಅವರು ಶಾಲಾ ಶುಲ್ಕ ಪಾವತಿಸಿ, ರಜಾ ದಿನಗಳಲ್ಲಿಯೂ ವಿಶೇಷ ತರಗತಿಗಳನ್ನು ನಡೆಸಿ, ಸ್ನಾತಕೋತ್ತರ ಪದವಿವರೆಗೆ ಶಿಕ್ಷಣ ಪಡೆಯಲು ತಂದೆಯಂತೆ ಬೆನ್ನೆಲುಬಾಗಿ ನಿಂತಿದ್ದರು.

ಸದ್ಯ ಬೆಂಗಳೂರಿನ ಪ್ರತಿಷ್ಠಿತ ಎಂಎನ್‌ಸಿ ಕಂಪನಿಯಲ್ಲಿ ಉದ್ಯೋಗಿಯಾಗಿರುವ ನವೀನ್, ತಮ್ಮ ಬದುಕು ರೂಪಿಸಿದ ಗುರುವಿನ ಋಣ ತೀರಿಸುವ ಉದ್ದೇಶದಿಂದ ಈ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ.

ಹುಬ್ಬಳ್ಳಿಯ ಮುರುಸಾವಿರ ಮಠದಲ್ಲಿ ಶ್ರೀ ಮುರುಗುರಾಜೇಂದ್ರ ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆದ ವಸ್ತ್ರದ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಕಾರಿನ ಕೀ ಹಸ್ತಾಂತರಿಸಲಾಯಿತು.

ಅನಿರೀಕ್ಷಿತ ಉಡುಗೊರೆಯಿಂದ ಭಾವುಕರಾದ ವಸ್ತ್ರದ್ ಅವರು, ತಮ್ಮ ಶಿಷ್ಯನ ಪ್ರೀತಿ ಮತ್ತು ಗೌರವ ಕಂಡು ಮೂಕವಿಸ್ಮಿತರಾದರು.

ಗುರು ನೀಡಿದ ಶಿಕ್ಷಣ, ಮಾರ್ಗದರ್ಶನ ಮತ್ತು ಪ್ರೀತಿಯನ್ನು ಎಂದಿಗೂ ಮರೆಯಬಾರದು ಎಂಬ ಸಂದೇಶವನ್ನು ಸಾರಿರುವ ಈ ಘಟನೆ, ಸಮಾಜಕ್ಕೆ ಮಾದರಿಯಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

About The Author