Political News: ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ತರಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಈ ಬಗ್ಗೆ ಬಿಜೆಪಿ ನಾಯಕರು ಕಿಡಿಕಾರಿದ್ದಾರೆ.
ಈ ಬಗ್ಗೆ ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಸಿ.ಟಿ.ರವಿ, ಜಾರಿಗೆ ತರುವಾಗ ‘ಅವರಿಗೂ ಫ್ರೀ, ಇವರಿಗೂ ಫ್ರೀ, ಕಾಕಾ ಪಾಟೀಲ್ ಹೆಂಡತಿಗೂ ಫ್ರೀ’ ಎನ್ನುತ್ತಾ ಜಾರಿಗೆ ತಂದ ಗೃಹಲಕ್ಷ್ಮಿ ಯೋಜನೆಯಲ್ಲಿ ಕಾಂಗ್ರೆಸ್ ಸರ್ಕಾರ ಈಗಾಗಲೇ ಸಾಕಷ್ಟು ಅವ್ಯವಹಾರಗಳನ್ನು ನಡೆಸಿದೆ. ಈಗ ಬೊಕ್ಕಸ ಬರಿದಾಗಿದ್ದು, ಕೊಟ್ಟ ಮಾತಿನಂತೆ ನಡೆದುಕೊಳ್ಳಲು ಸರ್ಕಾರ ಅಸಮರ್ಥವಾಗಿದೆ ಎಂದು ಕಿಡಿಕಾರಿದ್ದಾರೆ.
ತನ್ನ ಅಸಮರ್ಥತೆಯಿಂದ 1.1 ಲಕ್ಷಕ್ಕೂ ಹೆಚ್ಚಿನ ಮಹಿಳೆಯರನ್ನು ಗೃಹಲಕ್ಷ್ಮಿ ಯೋಜನೆಯಿಂದ ಹೊರಗಿಡಲು ಸರ್ಕಾರ ಮುಂದಾಗಿದೆ. ಸರ್ಕಾರದ ಅಸಮರ್ಥತೆಯ ಕಾರಣದಿಂದ ಅದೆಷ್ಟೋ ಅರ್ಹ ಫಲಾನುಭವಿಗಳೇ ಯೋಜನೆಯ ಪ್ರಯೋಜನ ಕಳೆದುಕೊಳ್ಳುವ ಅಪಾಯಕ್ಕೆ ಸಿಲುಕಿದ್ದಾರೆ.
ಚುನಾವಣೆಗೆ ಮುನ್ನ ಯಾವುದೇ ಷರತ್ತು ರಹಿತವಾಗಿ ಘೋಷಿಸಿದ್ದ ಯೋಜನೆಗಳಿಗೆ ಈಗ ಎಲ್ಲದಕ್ಕೂ ‘ಕಂಡಿಷನ್ಸ್ ಅಪ್ಲೈ’ ಎಂಬ ಮಾತುಗಳನ್ನು ಸರ್ಕಾರ ಆಡುತ್ತಿದೆ. ಇದು ತಮಗೆ ಮತ ನೀಡಿ, ಅಧಿಕಾರಕ್ಕೆ ತಂದ ಜನತೆಗೆ ಕಾಂಗ್ರೆಸ್ ಎಸಗುತ್ತಿರುವ ದ್ರೋಹ! ಎಂದು ಕಾಂಗ್ರೆಸ್ ವಿರುದ್ಧ ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.




