Hubli News: ಬೇಕರಿಗೆ ನುಗ್ಗಿ ದಾಂಧಲೆ; ಕೆಲಸಗಾರನ ಮೇಲೆ ಹಲ್ಲೆ

Hubli News: ಹುಬ್ಬಳ್ಳಿಯಲ್ಲಿ ಪುಂಡರ ಅಟ್ಟಹಾಸ ಮುಂದುವರಿದಿದ್ದು, ಬೇಕರಿಗೆ ನುಗ್ಗಿದ ದುಷ್ಕರ್ಮಿಗಳು ಕೆಲಸಗಾರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ. ಹಳೆಯ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಗಣೇಶನಗರದಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹುಬ್ಬಳ್ಳಿಯ ಗಣೇಶನಗರದ ಪವನ್ ಸ್ಕೂಲ್ ಸಮೀಪದ ಮಗವೀರ ಬೇಕರಿಯಲ್ಲಿ ಪುಂಡರು ದಾಂಧಲೆ ನಡೆಸಿದ ಘಟನೆ ನಡೆದಿದೆ. ಮಾತಿನ ಚಕಮಕಿಯಿಂದ ಆರಂಭವಾದ ಜಗಳ ವಿಕೋಪಕ್ಕೆ ತಿರುಗಿ ಬೇಕರಿಗೆ ನುಗ್ಗಿದ ಆರೋಪಿಗಳು ಕೆಲಸಗಾರನ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.

ಶಿವು ಎಂಬಾತ ಹಲ್ಲೆಗೆ ಒಳಗಾಗಿದ್ದು, ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ದರ್ಶನ, ರಾಹುಲ್ ಹಾಗೂ ಸ್ಟ್ಯಾಂಡಲಿ ಎಂಬ ಮೂವರು ಯುವಕರು ಬೇಕರಿಗೆ ನುಗ್ಗಿ ಮಾಲೀಕನ ಮೇಲೂ ಹಲ್ಲೆ ನಡೆಸಿ, ಅಂಗಡಿಯಲ್ಲಿದ್ದ ವಸ್ತುಗಳನ್ನು ಧ್ವಂಸಗೊಳಿಸಿರುವುದಾಗಿ ತಿಳಿದುಬಂದಿದೆ.

ಹಲ್ಲೆಯ ಪರಿಣಾಮ ಗಾಯಗೊಂಡ ಶಿವುವನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಗೆ ಸಂಬಂಧಿಸಿದ ಸಂಪೂರ್ಣ ದೃಶ್ಯಾವಳಿ ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ತನಿಖೆಗೆ ಮಹತ್ವದ ಸಾಕ್ಷ್ಯವಾಗಿ ಪರಿಣಮಿಸಿದೆ.

ಪ್ರಕರಣ ದಾಖಲಿಸಿಕೊಂಡಿರುವ ಹಳೆಯ ಹುಬ್ಬಳ್ಳಿ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಘಟನೆಯ ನಿಖರ ಕಾರಣ ಹಾಗೂ ಹಿನ್ನೆಲೆ ಕುರಿತು ತನಿಖೆ ಮುಂದುವರಿದಿದೆ.

About The Author