ಕರಾವಳಿಯಲ್ಲೇ ಕ್ಯಾಬಿನೆಟ್; ಪ್ರವಾಸೋದ್ಯಮ ಮತ್ತು ಆರ್ಥಿಕ ವಿಕಾಸಕ್ಕೆ ನಮ್ಮ ಸರ್ಕಾರದ ಹೆಜ್ಜೆ: ಸಿಎಂ

Political News: ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ ಕುರಿತಂತೆ ಇಂದು ವಿಧಾನಸೌಧದಲ್ಲಿ ಸಭೆ ನಡೆಯಿತು. ಸಿಎಂ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ನಿರ್ದೇಶಕ ರಿಷಬ್ ಶೆಟ್ಟಿ ಸೇರಿ ಅಧಿಕಾರಿಗಳು, ಹಲವು ಕಾಂಗ್ರೆಸ್ ನಾಯಕರು ಉಪಸ್ಥಿತರಿದ್ದರು.

ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕರ್ನಾಟಕವನ್ನು ಜಾಗತಿಕ ಮಟ್ಟದ ಪ್ರಮುಖ ಕರಾವಳಿ ಪ್ರವಾಸಿ ತಾಣವಾಗಿ ರೂಪಿಸುವ ಉದ್ದೇಶದೊಂದಿಗೆ, ವಿಶ್ವದರ್ಜೆಯ ಸುಸ್ಥಿರ ಪ್ರವಾಸೋದ್ಯಮ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು ಹಾಗೂ ಕರಾವಳಿ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಹಾಗೂ ನೈಸರ್ಗಿಕ ಸೌಂದರ್ಯವನ್ನು ಜಗತ್ತಿಗೆ ಪರಿಚಯಿಸುವ ಮೂಲಕ ಪ್ರವಾಸೋದ್ಯಮವನ್ನು ಮತ್ತಷ್ಟು ಸಮೃದ್ಧಗೊಳಿಸುವುದು ನಮ್ಮ ಮುಖ್ಯ ಗುರಿಯಾಗಿದೆ ಎಂದರು.

ವಿಧಾನ ಸೌಧದದಲ್ಲಿ ಇಂದು ಕರಾವಳಿಯ ಅಭಿವೃದ್ಧಿ ಕುರಿತು ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರೊಂದಿಗೆ ಸಭೆ ನಡೆಸಲಾಯಿತು. ಕರ್ನಾಟಕದ ಕರಾವಳಿ ತೀರವು ದೇಶದಲ್ಲೇ ಅತ್ಯಂತ ಸುಂದರ ಹಾಗೂ ಸುದೀರ್ಘವಾದ ಇತಿಹಾಸ ಹೊಂದಿದೆ. ಇಲ್ಲಿನ ಪರಿಸರಕ್ಕೆ ಯಾವುದೇ ಧಕ್ಕೆ ಬಾರದಂತೆ ಈ ಭಾಗವನ್ನು ಪ್ರವಾಸೋದ್ಯಮದ ಹಬ್‌ ಆಗಿ ಪರಿವರ್ತಿಸಲು ನಾವು ನಿರ್ಧರಿಸಿದ್ದೇವೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಇನ್ನು ಅವರು ಇಂದಿನ ಸಭೆಯಲ್ಲಿ ತೆಗೆದುಕ“ಂಡಿರುವ ನಿರ್ಧಾರಗಳು ಇಂತಿದೆ..

– ಕರಾವಳಿಯಲ್ಲೇ ಸಂಪುಟ ಸಭೆ: ಕರಾವಳಿಯ ಸ್ಥಳೀಯ ಸಮಸ್ಯೆಗಳನ್ನು ಅರಿತು ತಕ್ಷಣದ ನಿರ್ಧಾರ ಕೈಗೊಳ್ಳಲು ಶೀಘ್ರದಲ್ಲೇ ಕರಾವಳಿ ಭಾಗದಲ್ಲೇ ಕ್ಯಾಬಿನೆಟ್ ಸಭೆ ನಡೆಸಲಾಗುವುದು.

– ತಾಂತ್ರಿಕ ತಕರಾರುಗಳಿಗೆ ಬ್ರೇಕ್: ಸಿಆರ್‌ಝಡ್ (CRZ) ಮತ್ತು ಅರಣ್ಯ ಇಲಾಖೆಯಿಂದ ಯೋಜನೆಗಳಿಗೆ ಎದುರಾಗುತ್ತಿರುವ ತಾಂತ್ರಿಕ ತೊಂದರೆಗಳಿಗೆ 15-20 ದಿನಗಳ ಒಳಗಾಗಿ ಪರಿಹಾರದ ವರದಿ ನೀಡಲು ಅಧಿಕಾರಿಗಳಿಗೆ ತಾಕೀತು ಮಾಡಲಾಗಿದೆ.

– ಏಕ ಗವಾಕ್ಷಿ (ಸಿಂಗಲ್‌ ವಿಂಡೋ) ವ್ಯವಸ್ಥೆ: ಹೂಡಿಕೆದಾರರಿಗೆ ಇಲಾಖೆಗಳಿಂದ ಆಗುವ ಕಿರಿಕಿರಿಗಳನ್ನು ತಪ್ಪಿಸಿ, ಸುಗಮ ವ್ಯವಹಾರಕ್ಕಾಗಿ ಏಕ ಗವಾಕ್ಷಿ ಪದ್ಧತಿ ಜಾರಿಗೆ ಒಲವು ತೋರಲಾಗಿದೆ. ಉದ್ಯಮಿಗಳ ಬೇಡಿಕೆಯಂತೆ ಹೆಲಿ ಟೂರಿಸಂಗೆ ಉತ್ತೇಜನ.

– ಉದ್ಯೋಗ ಸೃಷ್ಟಿಗೆ ಆದ್ಯತೆ: ಕರ್ನಾಟಕ ಪ್ರವಾಸೋದ್ಯಮ ನೀತಿಯಡಿ ಈಗಾಗಲೇ ₹718.63 ಕೋಟಿ ಅಂದಾಜು ಹೂಡಿಕೆಯ 45 ಬೃಹತ್ ಯೋಜನೆಗಳನ್ನು ಅನುಮೋದಿಸಲಾಗಿದ್ದು, ಇದರಿಂದ 4,500 ಯುವಕರಿಗೆ ಉದ್ಯೋಗ ಸಿಗಲಿದೆ. ಈ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಲಾಗುವುದು.

– ಜಾಗತಿಕವಾಗಿ ನಮ್ಮ ಕರಾವಳಿ : ಕರಾವಳಿಯ ಸಂಸ್ಕೃತಿ, ಆಚರಣೆ, ಹೆಮ್ಮೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಸಾರ ಮತ್ತು ಪ್ರಚಾರ ಮಾಡಲಾಗುವುದು.

– ಕಲೆ ಮತ್ತು ಸಿನಿಮಾಗೆ ಪ್ರೋತ್ಸಾಹ: ಖ್ಯಾತ ಚಲನಚಿತ್ರ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಅವರ ಸಮ್ಮುಖದಲ್ಲಿ ಕರಾವಳಿಯ ಸಿನಿಮಾ, ಜನಪದ ಕಲೆ, ಸಂಗೀತಕ್ಕೆ ಪ್ರಾಶಸ್ತ್ಯ ನೀಡುವ ಬಗ್ಗೆ ಚರ್ಚಿಸಲಾಯಿತು. ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆಗಳನ್ನು ಸಾಧಿಸಲು ಮತ್ತು ಬಂಡವಾಳಗಳನ್ನು ಆಕರ್ಷಿಸಲು ಹೂಡಿಕೆದಾರರಿಗೆ ಸಹಾಯಧನ, ಬಡ್ಡಿ ಸಹಾಯಧನ ಮತ್ತು ರಿಯಾಯ್ತಿಗಳ ಮೂಲಕ ಪ್ರೋತ್ಸಾಹಗಳನ್ನು ನೀಡಲಾಗುವುದು.

About The Author