Political News: ಗೃಹಲಕ್ಷ್ಮೀ ಯೋಜನೆಯಲ್ಲಿ 225 ಕೋಟಿ ಹಗರಣ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಿಜೆಪಿ ನಾಯಕ ಸಿ.ಟಿ.ರವಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಗೃಹಲಕ್ಷ್ಮಿ ಯೋಜನೆಯ ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ಕೋಟ್ಯಾಧೀಶರಾಗಿದ್ದಾರಷ್ಟೇ ಎಂದು ಆರೋಪಿಸಿದ್ದಾರೆ.
ಗೃಹಲಕ್ಷ್ಮಿ ಯೋಜನೆಯ ಕುರಿತು ಅಗೆದಷ್ಟೂ ಅಕ್ರಮಗಳು ಬಯಲಿಗೆ ಬರುತ್ತಲೇ ಇವೆ. ಇದು ಕಣ್ತಪ್ಪಿನಿಂದ, ಯಾರೋ ಅಪರಾಧಿಗಳು ಮಾಡಿರುವ ಅಕ್ರಮ ಖಂಡಿತಾ ಅಲ್ಲ. ಇದು ಸಚಿವರು, ಕಾಂಗ್ರೆಸ್ ನಾಯಕರು, ಗ್ಯಾರಂಟಿ ಅನುಷ್ಠಾನ ಸಮಿತಿಯ ಉಸ್ತುವಾರಿಗಳು ಎಲ್ಲರೂ ಶಾಮೀಲಾಗಿಯೇ ನಡೆಸಿರುವ ಹಗರಣ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ದಿನದಿಂದ ದಿನಕ್ಕೆ ಈ ಹಗರಣದಲ್ಲಿ ಹೊಸ ವಿಚಾರಗಳು ಬೆಳಕಿಗೆ ಬರುತ್ತಿವೆ ಎಂದು ರವಿ ಹೇಳಿದ್ದಾರೆ.
ಫಲಾನುಭವಿಗಳು ಮನಬಂದಂತೆ ಖಾತೆ ಬದಲಾವಣೆ ಮಾಡಲು ಹೇಗೆ ಸಾಧ್ಯ? ಇದು ಯಾವುದೂ ಜನಸಾಮಾನ್ಯರು ಮಾಡುವ ಕೃತ್ಯವಲ್ಲ. ಇದು ಕಾಂಗ್ರೆಸಿನ ಎಲ್ಲ ಹೆಗ್ಗಣಗಳೂ ಸೇರಿ ಕೊರೆದಿರುವ ಕನ್ನ. ಬೆಂಗಳೂರು ಒಂದರಲ್ಲೇ 1.15 ಲಕ್ಷ ಫಲಾನುಭವಿಗಳು ಪದೇ ಪದೇ ಖಾತೆ ಬದಲಾವಣೆ ಮಾಡಿದ್ದಾರೆ. ಗ್ಯಾರಂಟಿ ಅನುಷ್ಠಾನ ಸಮಿತಿ ಎನ್ನುವ ಆಶ್ರಯ ಕೇಂದ್ರದಲ್ಲಿರುವ ಕಾಂಗ್ರೆಸ್ ನಾಯಕರು ಕಣ್ಣುಮುಚ್ಚಿ ಕುಳಿತಿದ್ದರೇನು? ಎಂದು ಆಡಳಿತ ಪಕ್ಷಕ್ಕೆ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.
1.08 ಲಕ್ಷ ಮೃತ ಫಲಾನುಭವಿಗಳ ಖಾತೆಗೆ 116 ಕೋಟಿ ರೂಪಾಯಿ ಜಮೆ ಮಾಡಲಾಗಿದೆ. ಕಳೆದ ವರ್ಷ ಮೂರು ತಿಂಗಳ ಗೃಹಲಕ್ಷ್ಮಿ ಹಣ ಪಾವತಿಸದೆ, 5,000 ಕೋಟಿ ರೂಪಾಯಿಗಳ ಅಕ್ರಮವಾಗಿದೆ. ಆ ಹಣ ಏನಾಯಿತು ಎನ್ನುವುದಕ್ಕೆ ಇಂದಿಗೂ ಸರ್ಕಾರದ ಬಳಿ ಉತ್ತರವಿಲ್ಲ ಎಂದು ಸಿ.ಟಿ.ರವಿ ಹೇಳಿದ್ದಾರೆ.




