Hubli News: ದೇಶದ ಮಹಾನಗರಗಳಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಹತ್ವದ ಹೆಜ್ಜೆ ಇಟ್ಟಿದೆ. ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಸಾರ್ವಜನಿಕ ವಲಯದಲ್ಲಿ ಒಣ ಕಸದಿಂದ ಹಸಿರು ಇದ್ದಿಲು ಉತ್ಪಾದಿಸುವ ಅತ್ಯಾಧುನಿಕ ಘಟಕ ಕಾರ್ಯಾರಂಭಕ್ಕೆ ಸಜ್ಜಾಗಿದ್ದು, ಕಸವೇ ಇನ್ನು ಇಂಧನವಾಗಿ ಪರಿವರ್ತನೆಯಾಗಲಿದೆ.
ಪ್ರತಿದಿನ ನೂರಾರು ಟನ್ ಒಣ ಕಸವನ್ನು ಸಂಸ್ಕರಿಸಿ ಹಸಿರು ಇದ್ದಿಲು ಉತ್ಪಾದಿಸುವ ಅತ್ಯಾಧುನಿಕ ಘಟಕ ಇದು. ಹುಬ್ಬಳ್ಳಿ ಹೊರವಲಯದ ಗಬ್ಬೂರು ಬಳಿ ರಾಷ್ಟ್ರೀಯ ಉಷ್ಣ ವಿದ್ಯುತ್ ನಿಗಮದ ಅಂಗಸಂಸ್ಥೆ ಎನ್ವಿವಿಎನ್ 157 ಕೋಟಿ ರೂಪಾಯಿ ವೆಚ್ಚದಲ್ಲಿ, ಮಹಾನಗರ ಪಾಲಿಕೆ ನೀಡಿರುವ 10 ಎಕರೆ ಜಾಗದಲ್ಲಿ ಈ ಘಟಕ ನಿರ್ಮಾಣಗೊಂಡಿದೆ. ಈಗಾಗಲೇ 36 ಗಂಟೆಗಳ ಯಶಸ್ವಿ ಪ್ರಾಯೋಗಿಕ ಪರೀಕ್ಷೆ ಪೂರ್ಣಗೊಂಡಿದ್ದು, ಇನ್ನೆರಡು-ಮೂರು ತಿಂಗಳಲ್ಲಿ ವಾಣಿಜ್ಯ ಉತ್ಪಾದನೆ ಆರಂಭವಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಅವರ ವಾರಣಾಸಿ ಯೋಜನೆಯ ಬಳಿಕ ದೇಶದಲ್ಲೇ ಎರಡನೇ ಹಾಗೂ ದಕ್ಷಿಣ ಭಾರತದಲ್ಲಿ ಮೊದಲ ಯೋಜನೆ ಎಂಬ ಹೆಗ್ಗಳಿಕೆ ಈ ಘಟಕಕ್ಕಿದೆ.
ಪ್ರತಿದಿನ 200 ಟನ್ ಒಣ ಕಸವನ್ನು ಸಂಸ್ಕರಿಸಿ ಸುಮಾರು 120 ಟನ್ ಗ್ರೀನ್ ಚಾರ್ಕೋಲ್ ಉತ್ಪಾದಿಸುವ ಸಾಮರ್ಥ್ಯ ಈ ಘಟಕಕ್ಕಿದೆ. ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಸಂಗ್ರಹವಾಗುವ ಒಣ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಪರಿಸರ ಸ್ನೇಹಿ ಇಂಧನವಾಗಿ ಪರಿವರ್ತಿಸಲಾಗುತ್ತದೆ. ಇದರಿಂದ ಕಸದ ಗುಡ್ಡಗಳ ಸಮಸ್ಯೆ ಕಡಿಮೆಯಾಗುವುದರ ಜೊತೆಗೆ ವಾಯು ಮಾಲಿನ್ಯ ನಿಯಂತ್ರಣಕ್ಕೂ ಸಹಕಾರಿಯಾಗಲಿದೆ.
ಈ ಘಟಕದಲ್ಲಿ ಬಳಸುತ್ತಿರುವ ಟೋರಿಫ್ಯಾಕ್ಷನ್ ತಂತ್ರಜ್ಞಾನದಲ್ಲಿ ಆಮ್ಲಜನಕ ರಹಿತ ವಾತಾವರಣದಲ್ಲಿ 200 ರಿಂದ 300 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶದಲ್ಲಿ ಒಣ ಕಸವನ್ನು ಸಂಸ್ಕರಿಸಲಾಗುತ್ತದೆ. ಬಳಿಕ ಹೆಚ್ಚಿನ ಉಷ್ಣ ಮೌಲ್ಯ ಹೊಂದಿರುವ ಗ್ರೀನ್ ಚಾರ್ಕೋಲ್ ಸಿದ್ಧವಾಗುತ್ತದೆ. ಈ ಇಂಧನವನ್ನು ಉಷ್ಣ ವಿದ್ಯುತ್ ಸ್ಥಾವರಗಳು ಹಾಗೂ ಸಿಮೆಂಟ್ ಕಾರ್ಖಾನೆಗಳಲ್ಲಿ ಬಳಸಲಾಗುತ್ತದೆ. ವಿಜಯಪುರ ಜಿಲ್ಲೆಯ ಕೂಡಗಿ ಎನ್ಟಿಪಿಸಿ ಘಟಕಕ್ಕೂ ಇದೇ ಚಾರ್ಕೋಲ್ ಪೂರೈಕೆಯಾಗಲಿದ್ದು, ಕಲ್ಲಿದ್ದಲು ಬಳಕೆ ಗಣನೀಯವಾಗಿ ಕಡಿಮೆಯಾಗುವ ನಿರೀಕ್ಷೆಯಿದೆ.
ಈ ಯೋಜನೆಯಿಂದ ಪ್ರತಿದಿನ 200 ಟನ್ ಕಸ ವೈಜ್ಞಾನಿಕವಾಗಿ ವಿಲೇವಾರಿಯಾಗಲಿದ್ದು, ವರ್ಷಕ್ಕೆ ಸುಮಾರು 55 ಸಾವಿರ ಟನ್ ಕಾರ್ಬನ್ ಡೈಆಕ್ಸೈಡ್ ಹೊರಸೂಸುವಿಕೆ ತಗ್ಗುವ ಸಾಧ್ಯತೆಯಿದೆ. ಚಾರ್ಕೋಲ್ ಮಾರಾಟದಿಂದ ಮಹಾನಗರ ಪಾಲಿಕೆಗೆ ರಾಯಲ್ಟಿ ಆದಾಯವೂ ದೊರೆಯಲಿದ್ದು, ನೂರಾರು ಜನರಿಗೆ ಉದ್ಯೋಗಾವಕಾಶವೂ ಸೃಷ್ಟಿಯಾಗಲಿದೆ. ವಿಶೇಷವೆಂದರೆ, ಈ ಯೋಜನೆಗಾಗಿ ಪಾಲಿಕೆ ಯಾವುದೇ ನಿರ್ಮಾಣ ಅಥವಾ ನಿರ್ವಹಣಾ ವೆಚ್ಚ ಭರಿಸುತ್ತಿಲ್ಲ. ಒಟ್ಟಾರೆ, ಕಸವನ್ನು ಪರಿಸರ ಸ್ನೇಹಿ ಇಂಧನವಾಗಿ ಪರಿವರ್ತಿಸುವ ಈ ಮಹತ್ವಾಕಾಂಕ್ಷಿ ಯೋಜನೆ ಯಶಸ್ವಿಯಾದರೆ, ಹುಬ್ಬಳ್ಳಿ-ಧಾರವಾಡ ಮಾತ್ರವಲ್ಲ, ಇಡೀ ದಕ್ಷಿಣ ಭಾರತಕ್ಕೆ ಮಾದರಿಯಾಗುವ ಸಾಧ್ಯತೆ ಇದೆ.
ಕ್ಯಾಮೆರಾ ಪರ್ಸನ್ ಹೇಮಂತ ಜೊತೆ, ಸಂಗಮೇಶ್ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ.




