Dharwad: ಮುಂಗಾರು ಮಳೆಯ ನಿರೀಕ್ಷೆಯಲ್ಲಿ ಹೊಲಕ್ಕೆ ಇಳಿದಿದ್ದ ಉತ್ತರ ಕರ್ನಾಟಕದ ಅನ್ನದಾತ ಈಗ ಆಕಾಶದತ್ತ ಕಣ್ಣಿಟ್ಟಿದ್ದಾನೆ. ಉತ್ತಮ ಮಳೆಯಾಗುತ್ತದೆ ಎಂಬ ನಂಬಿಕೆಯಲ್ಲಿ ಹೆಸರು, ಶೇಂಗಾ, ಉದ್ದು, ಮೆಣಸಿನಕಾಯಿ ಹಾಗೂ ಹತ್ತಿ ಬೆಳೆಗಳ ಬಿತ್ತನೆ ಮಾಡಿದ್ದ ರೈತರಿಗೆ ಈಗ ಮಳೆ ಕೈಕೊಟ್ಟಿದೆ. ಬೆಳೆಗಳು ಕಣ್ಣೆದುರೇ ಒಣಗುತ್ತಿದ್ದು, ಸರ್ಕಾರ ತಕ್ಷಣ ಮೋಡ ಬಿತ್ತನೆ ನಡೆಸಿ ರೈತರ ನೆರವಿಗೆ ಧಾವಿಸಬೇಕು ಎಂಬ ಆಗ್ರಹ ಕೇಳಿಬಂದಿದೆ.
ಮುಂಗಾರು ಆರಂಭವಾಗುತ್ತಿದ್ದಂತೆ ಉತ್ತಮ ಮಳೆಯ ನಿರೀಕ್ಷೆಯಲ್ಲಿ ರೈತರು ಹೊಲಗಳಿಗೆ ಇಳಿದು ಹೆಸರು, ಶೇಂಗಾ, ಉದ್ದು, ಮೆಣಸಿನಕಾಯಿ ಹಾಗೂ ಹತ್ತಿ ಸೇರಿದಂತೆ ವಿವಿಧ ಬೆಳೆಗಳ ಬಿತ್ತನೆ ಮಾಡಿದ್ದರು. ಆರಂಭದಲ್ಲಿ ಸುರಿದ ಒಂದೆರಡು ಮಳೆಯು ರೈತರಲ್ಲಿ ಹೊಸ ಭರವಸೆ ಮೂಡಿಸಿತ್ತು. ಆದರೆ ನಂತರ ಮಳೆ ಸಂಪೂರ್ಣ ಕೈಕೊಟ್ಟ ಪರಿಣಾಮ ಈಗ ಹೊಲಗಳಲ್ಲಿ ಹಸಿರು ಕಾಣೆಯಾಗಿದ್ದು, ಬೆಳೆಗಳು ಬಿಸಿಲಿನ ತಾಪಕ್ಕೆ ಒಣಗಲಾರಂಭಿಸಿವೆ.
ಬೀಜ, ಗೊಬ್ಬರ, ಉಳುಮೆ ಹಾಗೂ ಕೂಲಿ ಕೆಲಸಗಳಿಗೆ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿರುವ ರೈತರು ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲ ಮಾಡಿ ಕೃಷಿ ಮಾಡಿರುವ ರೈತರಿಗೆ ಬೆಳೆ ಉಳಿಯುತ್ತದೆಯೋ ಇಲ್ಲವೋ ಎಂಬ ಚಿಂತೆ ಕಾಡುತ್ತಿದೆ. ಇನ್ನೂ ಕೆಲವೇ ದಿನಗಳಲ್ಲಿ ಮಳೆಯಾಗದಿದ್ದರೆ ಮರುಬಿತ್ತನೆ ಅನಿವಾರ್ಯವಾಗುವ ಆತಂಕವೂ ಎದುರಾಗಿದೆ.
ಮಳೆಯ ಕೊರತೆಯಿಂದ ಉತ್ತರ ಕರ್ನಾಟಕದ ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದರೂ ಸರ್ಕಾರ ಈ ಭಾಗದ ಬಗ್ಗೆ ನಿರೀಕ್ಷಿತ ಮಟ್ಟದಲ್ಲಿ ಗಮನ ಹರಿಸುತ್ತಿಲ್ಲ ಎಂಬ ಅಸಮಾಧಾನ ರೈತರಲ್ಲಿ ವ್ಯಕ್ತವಾಗಿದೆ. ತಕ್ಷಣ ಮೋಡ ಬಿತ್ತನೆ ನಡೆಸಿ, ಬೆಳೆ ಹಾನಿ ಸಮೀಕ್ಷೆ ಮಾಡಿ ಪರಿಹಾರ ಘೋಷಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
“ಸರ್ಕಾರ ಬಿಡದಿ ಭಾಗದ ಅಭಿವೃದ್ಧಿ ಬಗ್ಗೆ ಮಾತ್ರ ಯೋಚಿಸದೆ, ಬರದ ಬವಣೆಯಲ್ಲಿ ನರಳುತ್ತಿರುವ ಉತ್ತರ ಕರ್ನಾಟಕದ ರೈತರ ಬದುಕಿನ ಬಗ್ಗೆಯೂ ಕಾಳಜಿ ವಹಿಸಬೇಕು” ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೆಸರು, ಶೇಂಗಾ, ಉದ್ದು, ಮೆಣಸಿನಕಾಯಿ ಹಾಗೂ ಹತ್ತಿ ಬೆಳೆಗಳು ಒಣಗುತ್ತಿದ್ದು, ಕೂಡಲೇ ಮೋಡ ಬಿತ್ತನೆ ಜಾರಿಗೊಳಿಸಿ ರೈತರನ್ನು ಉಳಿಸಬೇಕೆಂದು ಆಗ್ರಹಿಸಿದ್ದಾರೆ.
ಒಟ್ಟಾರೆಯಾಗಿ, ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಮಾಡಿದ್ದ ಉತ್ತರ ಕರ್ನಾಟಕದ ಅನ್ನದಾತನ ಬದುಕು ಈಗ ಮಳೆಯ ಮೇಲೆಯೇ ನಿಂತಿದೆ. ಇನ್ನೂ ಕೆಲವೇ ದಿನಗಳಲ್ಲಿ ಉತ್ತಮ ಮಳೆಯಾಗದಿದ್ದರೆ ಈ ಬಾರಿಯ ಕೃಷಿ ಸಂಪೂರ್ಣ ಹಾನಿಯಾಗುವ ಭೀತಿ ಎದುರಾಗಿದೆ. ಸರ್ಕಾರ ತಕ್ಷಣ ಮೋಡ ಬಿತ್ತನೆ, ಬೆಳೆ ಹಾನಿ ಸಮೀಕ್ಷೆ ಹಾಗೂ ವಿಶೇಷ ಪರಿಹಾರ ಪ್ಯಾಕೇಜ್ ಘೋಷಿಸುವ ಮೂಲಕ ರೈತರ ನೆರವಿಗೆ ಬರಬೇಕೆಂಬುದು ಅನ್ನದಾತರ ಒತ್ತಾಯವಾಗಿದೆ.
ಕ್ಯಾಮೆರಾ ಪರ್ಸನ್ ಹೇಮಂತ್ ಜೊತೆ, ಸಂಗಮೇಶ್ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ




