Political News: ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಲಾಡ್ಲೆ ಮಶಾಕ್ ದರ್ಗಾ ಗಲಭೆ ಸೇರಿದಂತೆ 52 ಕ್ರಿಮಿನಲ್ ಕೇಸ್ ಹಿಂಪಡೆದಿದ್ದ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್ ತಡೆ ನೀಡಿದೆ.
ಈ ಬಗ್ಗೆ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕಲಬುರ್ಗಿಯ ಆಳಂದದಲ್ಲಿ ಪವಿತ್ರ ಶಿವಲಿಂಗಕ್ಕೆ ಅಪಚಾರ ಬಗೆದ ಕೋಮು ಗಲಭೆಯ ಆರೋಪಿಗಳು ಸೇರಿದಂತೆ 52 ಆರೋಪಿಗಳ ಮೇಲಿದ್ದ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಕಾನೂನುಬಾಹಿರವಾಗಿ ಹಿಂಪಡೆಯಲು ಯತ್ನಿಸಿದ್ದ ಈ ತುಘಲಕ್ ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ರಾಜಕೀಯಕ್ಕೆ ರಾಜ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿ ತಕ್ಕ ಸಂದೇಶ ನೀಡಿದೆ.
ಕೇವಲ ವೋಟ್ ಬ್ಯಾಂಕ್ ಮತ್ತು ತಮ್ಮ ರಾಜಕೀಯ ಲಾಭಕ್ಕಾಗಿ, ನೆಲದ ಕಾನೂನನ್ನು, ಸಂವಿಧಾನದ ಸದಾಶಯಗಳನ್ನು ಹಾಗೂ ನ್ಯಾಯಾಂಗದ ನಿಯಮಗಳನ್ನು ಗಾಳಿಗೆ ತೂರಿ ಸಮಾಜಘಾತುಕ ಶಕ್ತಿಗಳನ್ನು ರಕ್ಷಿಸಲು ಹೊರಟಿದ್ದ ಕಾಂಗ್ರೆಸ್ ಸರ್ಕಾರ ಇನ್ನಾದರೂ ಎಚ್ಚರ ವಹಿಸಬೇಕು. ಅಧಿಕಾರ ಇದ್ದ ಮಾತ್ರಕ್ಕೆ ತಮ್ಮ ಮನಸ್ಸಿಗೆ ಬಂದಂತೆ ನಡೆಯುವದಕ್ಕೆ ಅವಕಾಶವಿಲ್ಲ, ಕಾಯ್ದೆ-ಕಾನೂನುಗಳು ಎಲ್ಲರಿಗೂ ಒಂದೇ ಎನ್ನುವುದನ್ನು ನ್ಯಾಯಾಲಯ ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ವಿಜಯೇಂದ್ರ ಹೇಳಿದ್ದಾರೆ.
ನ್ಯಾಯಾಲಯದ ಕಟ್ಟುನಿಟ್ಟಿನ ಆದೇಶಗಳಿದ್ದರೂ ಲೆಕ್ಕಿಸದೆ, ತಮಗೆ ಬೇಕಾದವರನ್ನು ಅಪರಾಧ ಮುಕ್ತಗೊಳಿಸಲು ಹೊರಟಿದ್ದ ಕಾಂಗ್ರೆಸ್ ಸರ್ಕಾರದ ದುರುದ್ದೇಶವನ್ನು ಮತ್ತು ಬೇಜವಾಬ್ದಾರಿ ನಡೆಯನ್ನು ನಾಡಿನ ಜನತೆ ಕ್ಷಮಿಸುವುದಿಲ್ಲ. ಸಾರ್ವಜನಿಕ ಹಿತಾಸಕ್ತಿ ಹಾಗೂ ಸಮಾಜದ ಶಾಂತಿ ಕದಡುವ ಕಾಂಗ್ರೆಸ್ಸಿನ ಕೆಟ್ಟ ನಿರ್ಧಾರಗಳ ವಿರುದ್ಧ ನ್ಯಾಯಾಂಗ ಮತ್ತು ಜನತಾ ನ್ಯಾಯಾಲಯದಲ್ಲಿ ನಮ್ಮ ಹೋರಾಟ ಮುಂದುವರಿಸಲು ನಮಗೆ ಹೆಚ್ಚಿನ ಬಲ ಬಂದಂತಾಗಿದೆ. ಇನ್ನು ಮೇಲಾದರೂ ಈ ತುಘಲಕ್ ಕಾಂಗ್ರೆಸ್ ಸರ್ಕಾರ ಎಚ್ಚರಗೊಳ್ಳಲಿ, ಇಂತಹ ಸಂವಿಧಾನ-ವಿರೋಧಿ ಕ್ರಮಗಳನ್ನು ತೆಗೆದುಕೊಳ್ಳದೆ ಎಚ್ಚರಿಕೆಯಿಂದ ನಡೆಯಲಿ ಎಂದು ಎಚ್ಚರಿಸುತ್ತೇನೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.




