Hubli News: ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ಅಕ್ರಮ ನಡೆಯುತ್ತಿದೆ ಎಂದು ಬಿಜೆಪಿಗರು ಆರೋಪಿಸುತ್ತಿದ್ದಾರೆ. ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಕೂಡ ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದೀಗ ಆ ಆರೋಪಕ್ಕೆ ಸಾಕ್ಷಿಯೂ ಸಿಗುತ್ತಿದೆ.
ಮನೆ ಮನೆಗೆ ಹೋಗಿ ಎಸ್ಐಆರ್ ಪ್ರಕ್ರಿಯೆ ಶುರು ಮಾಡಬೇಕಿತ್ತು. ಆದರೆ ಮಸೀದಿಗೆ ಕರೆದು, ಅರ್ಜಿ ನೀಡಿ ಎಂದು ಮತದಾರರಿಗೆ ಹೇಳಲಾಗಿದೆ. ಈ ವೀಡಿಯೋ ವೈರಲ್ ಆಗುತ್ತಿದ್ದಂತೆ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿನ್ನೆ ರಾಮನಗರದಲ್ಲಿ ಮತದಾರರ ಪಟ್ಟಿಯ ಪರಿಷ್ಕರಣೆಯಲ್ಲಿ ನಡೆದಿದ್ದು, ಇಂದು ನಮ್ಮ ಲೋಕಸಭಾ ಕ್ಷೇತ್ರದ ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರಗಳು ಸೇರಿದಂತೆ ರಾಜ್ಯದ ಹಲವೆಡೆ ಆರಂಭವಾಗಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಕಾನೂನುಬಾಹಿರವಾಗಿ, ವ್ಯವಸ್ಥಿತವಾಗಿ ಬೃಹತ್ ಅಕ್ರಮ ನಡೆಸಲಾಗುತ್ತಿದೆ. ಇದು ಕೇವಲ ನಿಯಮಗಳ ಉಲ್ಲಂಘನೆಯಲ್ಲ, ನಮ್ಮ ಪ್ರಜಾಪ್ರಭುತ್ವದ ಆಶಯಗಳಿಗೇ ಬಗೆದ ದ್ರೋಹ ಎಂದು ಜೋಶಿ ಕಿಡಿಕಾರಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ (ECI) ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಸಂಪೂರ್ಣವಾಗಿ ಮೂಲೆಗೆ ತಳ್ಳಲಾಗಿದೆ. ಕೇವಲ ರಾಜಕೀಯ ಲಾಭಕ್ಕಾಗಿ, ಮತದಾರರ ಪಟ್ಟಿಯನ್ನು ತಮಗೆ ಬೇಕಾದಂತೆ ತಿರುಗಿಸಲು ಸರ್ಕಾರದ ಉನ್ನತ ಮಟ್ಟದಿಂದಲೇ ವ್ಯವಸ್ಥಿತ ಸಂಚು ರೂಪಿಸಲಾಗಿದೆ. ಸ್ವತಂತ್ರವಾಗಿ ನಡೆಯಬೇಕಾದ ಸಾಂವಿಧಾನಿಕ ಪ್ರಕ್ರಿಯೆಯಲ್ಲಿ ಸ್ಥಳೀಯ ಬಿಎಲ್ಒ (BLO)ಗಳನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದ್ದು, ಆಡಳಿತ ಯಂತ್ರದ ಮೇಲೆ ತೀವ್ರ ಒತ್ತಡ ಹೇರಲಾಗುತ್ತಿದೆ ಎಂದು ಜೋಶಿ ಆರೋಪಿಸಿದ್ದಾರೆ.
“SIR ನಿಯಮಗಳ ಪ್ರಕಾರ ಮತಗಟ್ಟೆ ಅಧಿಕಾರಿಗಳು (BLO) ಜಿಲ್ಲಾ ಚುನಾವಣಾ ಅಧಿಕಾರಿಗಳ (DEO/DC) ಕಟ್ಟುನಿಟ್ಟಿನ ನಿರ್ದೇಶನದಂತೆ ಕಡ್ಡಾಯವಾಗಿ ಮನೆ-ಮನೆಗೆ ತೆರಳಿ ಅಲ್ಲಿರುವ ಕುಟುಂಬ ಸದಸ್ಯರನ್ನು ಖುದ್ದಾಗಿ ಗುರುತಿಸಬೇಕು.” ಆದರೆ ಆಘಾತಕಾರಿ ವಿಷಯವೆಂದರೆ, ಶಿಗ್ಗಾಂವಿ-ಸವಣೂರು ಕ್ಷೇತ್ರ ಸೇರಿದಂತೆ ರಾಜ್ಯದೆಲ್ಲೆಡೆ ಈ ನಿಯಮಗಳನ್ನೆಲ್ಲ ಗಾಳಿಗೆ ತೂರಿ, ಮಸೀದಿಯಲ್ಲಿ ಕುಳಿತು ಎನ್ಯೂಮರೇಷನ್ ಫಾರ್ಮ್‌ಗಳನ್ನು ಭರ್ತಿ ಮಾಡಿಕೊಡಲಾಗುತ್ತಿದೆ! ಇದನ್ನು ವಾಟ್ಸಾಪ್ ಗ್ರೂಪ್‌ಗಳಲ್ಲಿ ಬಹಿರಂಗವಾಗಿ ಪ್ರಚಾರ ಮಾಡಲಾಗುತ್ತಿದ್ದು, ರಾಜ್ಯದ ಅನೇಕ ಕಡೆಗಳಿಂದ ಇಂತಹದ್ದೇ ಅಕ್ರಮಗಳ ಬಗ್ಗೆ ಕರೆಗಳು ಬರುತ್ತಿವೆ.
ಜನಸಾಮಾನ್ಯರ ಧ್ವನಿಯನ್ನು ಹತ್ತಿಕ್ಕಲು ನಡೆಸುತ್ತಿರುವ ಈ ವ್ಯವಸ್ಥಿತ ಪಿತೂರಿಯ ವಿರುದ್ಧ ತಕ್ಷಣವೇ ನಿಷ್ಪಕ್ಷಪಾತ ಹಾಗೂ ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥ ಅಧಿಕಾರಿಗಳು ಮತ್ತು ಇದರ ಹಿಂದಿರುವ ರಾಜಕೀಯ ಕೈಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹಿಸಿದ್ದಾರೆ.




