Koppala News: ಕೊಪ್ಪಳ ಜಿಲ್ಲೆಯ ವಿಕಲಚೇತನರ ಹಕ್ಕುಗಳ ರಕ್ಷಣೆ ಹಾಗೂ ತ್ವರಿತ ಗತಿಯಲ್ಲಿ ಯುಡಿಐಡಿ (UDID) ಕಾರ್ಡ್ ವಿತರಿಸುವಂತೆ ಆಗ್ರಹಿಸಿ ಕರ್ನಾಟಕ ಅಂಗವಿಕಲ ರಾಜ್ಯ ಒಕ್ಕೂಟದ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಕಳೆದ 6ರಿಂದ 7 ತಿಂಗಳುಗಳು ಕಳೆದರೂ ಅರ್ಹ ಫಲಾನುಭವಿಗಳಿಗೆ ಯುಡಿಐಡಿ ಕಾರ್ಡ್ ಸಿಗದಿರುವುದು ಜಿಲ್ಲೆಯ ವಿಕಲಚೇತನ ಸಮುದಾಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಜಿಲ್ಲಾ ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯದ ಧೋರಣೆಯನ್ನು ಖಂಡಿಸಿದ ಒಕ್ಕೂಟದ ಪದಾಧಿಕಾರಿಗಳು, ಕಾರ್ಡ್ಗಳ ವಿತರಣೆ ಬಗ್ಗೆ ಕೇಳಿದರೆ ಯಾವುದೇ ಅಧಿಕಾರಿಗಳು ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ದೂರಿದ್ದಾರೆ.
ಈ ಹಿಂದೆ ಇದ್ದ ಅಧಿಕಾರಿಗಳು ಕೇವಲ ಒಂದೇ ವಾರದಲ್ಲಿ ಅರ್ಜಿಗಳನ್ನು ಪರಿಶೀಲಿಸಿ ಅನುಮೋದನೆ ನೀಡುತ್ತಿದ್ದರು, ಆದರೆ ಪ್ರಸ್ತುತ ಇರುವ ಅಧಿಕಾರಿಗಳು ಯುಡಿಐಡಿ ಕಾರ್ಡ್ಗಳನ್ನು ‘ಅಪ್ರೂವ್’ ಮಾಡುತ್ತಿಲ್ಲ ಎಂದು ಆರೋಪಿಸಲಾಗಿದೆ. ಇದರಿಂದಾಗಿ ಶಾಲಾ-ಕಾಲೇಜುಗಳಿಗೆ ಹೋಗುವ ವಿಕಲಚೇತನ ವಿದ್ಯಾರ್ಥಿಗಳಿಗೆ ತುಂಬಾ ತೊಂದರೆಯಾಗುತ್ತಿದ್ದು, ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳನ್ನು ಮತ್ತು ಸೌಲಭ್ಯಗಳನ್ನು ಪಡೆದುಕೊಳ್ಳಲು ಅರ್ಹರು ವಂಚಿತರಾಗುತ್ತಿದ್ದಾರೆ.
ಯುಡಿಐಡಿ ಕಾರ್ಡ್ ವಿಳಂಬದ ಜೊತೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ವಿಕಲಚೇತನರ ಸುಗಮ ಓಡಾಟಕ್ಕೆ ಅಗತ್ಯವಿರುವ ರ್ಯಾಂಪ್, ವೀಲ್ ಚೇರ್ ಹಾಗೂ ಲಿಫ್ಟ್ ವ್ಯವಸ್ಥೆಗಳು ಸಮರ್ಪಕವಾಗಿಲ್ಲದಿರುವುದನ್ನು ಮನವಿಯಲ್ಲಿ ಎತ್ತಿ ತೋರಿಸಲಾಗಿದೆ. ಇದರೊಂದಿಗೆ ಜಿಲ್ಲಾ ಮಟ್ಟದಲ್ಲಿ ನಿಯಮಿತವಾಗಿ ನಡೆಯಬೇಕಿದ್ದ ವಿಕಲಚೇತನರ ಕುಂದು-ಕೊರತೆಗಳ ಸಭೆಗಳು ಸ್ಥಗಿತಗೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಲಾಗಿದ್ದು, ತಕ್ಷಣವೇ ಸಭೆಗಳನ್ನು ಪುನರಾರಂಭಿಸಬೇಕು ಎಂದು ಒತ್ತಾಯಿಸಲಾಗಿದೆ.
ಹಾಗೆಯೇ ಎಂ.ಆರ್.ಡಬ್ಲ್ಯೂ, ವಿ.ಆರ್.ಡಬ್ಲ್ಯೂ ಮತ್ತು ಯು.ಆರ್.ಡಬ್ಲ್ಯೂ ಕಾರ್ಯಕರ್ತರಿಗೆ ಶೇಕಡಾ 5ರಷ್ಟು ಅನುದಾನದಲ್ಲಿ ಸಾರಿಗೆ ವೆಚ್ಚ ನೀಡಬೇಕು ಹಾಗೂ ಕಳೆದ ಮೂರು ತಿಂಗಳುಗಳಿಂದ ತಡೆಹಿಡಿಯಲಾಗಿರುವ ವಿಕಲಚೇತನರ ಮಾಶಾಸನವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಲಾಗಿದೆ.
ಈ ಪ್ರಮುಖ ಹೋರಾಟದ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಿಕಲಚೇತನರ ಒಕ್ಕೂಟದ ರಾಜ್ಯ ಉಪಾಧ್ಯಕ್ಷರಾದ ಮಲ್ಲಿಕಾರ್ಜುನ ವೈ. ಪೂಜಾರ, ಜಿಲ್ಲಾಧ್ಯಕ್ಷರಾದ ಅನ್ವರ್ ಪಟೇಲ್ ಹಾಗೂ ಗಂಗಾವತಿ ತಾಲೂಕು ಅಧ್ಯಕ್ಷರಾದ ಹುಲಗಪ್ಪ ಕಾಗೇರಿ ಉಪಸ್ಥಿತರಿದ್ದರು. ಇವರೊಂದಿಗೆ ಒಕ್ಕೂಟದ ನಿರ್ದೇಶಕರಾದ ಈರಪ್ಪ ಕರೆಕುರಿ, ಮಂಜುನಾಥ ಹೊಸಕೇರಾ, ರಾಘವೇಂದ್ರ ಕೊಪ್ಪಳ, ಬಸಯ್ಯ, ಸಿದ್ದಲಿಂಗಯ್ಯ ಗೊರ್ಲೆಕೊಪ್ಪ, ವೆಂಕಟರಡ್ಡಿ ಸೇರಿದಂತೆ ಹುಲಿಗೆಮ್ಮ, ಕರಿಯಮ್ಮ, ಸತ್ಯಮ್ಮ, ಮಂಜುಳಾ, ಗುರುಲಿಂಗಪ್ಪ, ಶರಣಪ್ಪ ಬ್ಯಾಳಿ, ಷಣ್ಮುಖಪ್ಪ, ವೀರಭದ್ರಪ್ಪ, ಮಾಂತೇಶ್ ಮತ್ತಿತರ ನೂರಾರು ವಿಕಲಚೇತನ ಬಂಧುಗಳು ಸಕ್ರಿಯವಾಗಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಿದರು.




