ಬಂಡಿದಾರಿ ಗಲಾಟೆ ಹಿನ್ನೆಲೆ 15 ರಿಂದ 20 ಜನರ ನಡುವೆ ಗುಂಪು ಘರ್ಷಣೆ

Haveri News: ಹಾವೇರಿ: ಹಾವೇರಿ ಜಿಲ್ಲೆಯಲ್ಲಿ ಬಂಡಿದಾರಿ ವಿವಾದ ರಕ್ತರಂಜಿತ ಘರ್ಷಣೆಗೆ ಕಾರಣವಾಗಿದೆ. ಎರಡು ಕುಟುಂಬಗಳ ನಡುವೆ ಆರಂಭವಾದ ಜಮೀನು ಮತ್ತು ರಸ್ತೆ ಅತಿಕ್ರಮಣದ ವಿವಾದ, ಮಾರಾಮಾರಿ ಹಂತ ತಲುಪಿ ಹಲವರು ಗಾಯಗೊಂಡಿದ್ದಾರೆ. ಬಡಗಿ, ಕುಡುಗೋಲು ಹಾಗೂ ಕಂದಲಿಗಳಿಂದ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದ್ದು, ಟಿಟಿ ವಾಹನ ಹಾಯಿಸಿ ಕೊಲೆ ಯತ್ನಕ್ಕೂ ಪ್ರಯತ್ನಿಸಲಾಗಿದೆ ಎನ್ನಲಾಗಿದೆ. ಸದ್ಯ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದಾರೆ.

ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಬ್ಯಾಗವಾದಿ ಗ್ರಾಮದಲ್ಲಿ ಎರಡು ಕುಟುಂಬಗಳ ನಡುವೆ ಬಂಡಿದಾರಿ ವಿವಾದ ಗಂಭೀರ ಸ್ವರೂಪ ಪಡೆದಿದೆ. ಸುಮಾರು 15 ರಿಂದ 20 ಮಂದಿ ಭಾಗಿಯಾಗಿದ್ದ ಗುಂಪು ಘರ್ಷಣೆಯಲ್ಲಿ ಬಡಗಿ, ಕುಡುಗೋಲು ಹಾಗೂ ಕಂದಲಿಗಳಿಂದ ಪರಸ್ಪರ ಹಲ್ಲೆ ನಡೆಸಲಾಗಿದೆ ಎಂದು ತಿಳಿದುಬಂದಿದೆ.

ಮಾಲತೇಶ ನಿಂಗಪ್ಪ ಕಾಮೆರ ಅವರ 17 ಎಕರೆ ಜಮೀನಿನಲ್ಲಿರುವ ಸುಮಾರು 20 ಅಡಿ ಅಗಲದ ರಸ್ತೆಯನ್ನು ಅತಿಕ್ರಮಿಸಲಾಗಿದೆ ಎಂಬ ಆರೋಪ ಈ ವಿವಾದಕ್ಕೆ ಮೂಲ ಕಾರಣವಾಗಿದೆ. ಅತಿಕ್ರಮಣ ತೆರವುಗೊಳಿಸುವಂತೆ ಉದ್ದನಕಾಲು ಕುಟುಂಬಸ್ಥರು ತಹಶೀಲ್ದಾರರಿಗೆ ಅರ್ಜಿ ಸಲ್ಲಿಸಿದ್ದರು. ಇದೇ ವಿಚಾರವಾಗಿ ಉಭಯ ಕುಟುಂಬಗಳ ನಡುವೆ ಮಾತಿನ ಚಕಮಕಿ ಆರಂಭವಾಗಿ ಬಳಿಕ ಮಾರಾಮಾರಿ ನಡೆದಿದೆ.

ಘರ್ಷಣೆ ವೇಳೆ ಕೆಲವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಟಿಟಿ ವಾಹನ ಹಾಯಿಸಿ ಕೊಲೆ ಯತ್ನ ನಡೆಸಿದ ಆರೋಪವೂ ಕೇಳಿಬಂದಿದೆ. ಘಟನೆಯಲ್ಲಿ 7ರಿಂದ 8 ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ.

ಗಾಯಾಳುಗಳನ್ನು ಹಾವೇರಿ ಜಿಲ್ಲಾಸ್ಪತ್ರೆ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಹಾಗೂ ವೀರಾಪುರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನೆಗೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಬ್ಯಾಗವಾದಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ನಿರಂತರ ಗಸ್ತು ಮುಂದುವರಿದಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹೆಚ್ಚುವರಿ ಎಸ್‌ಪಿ ಹಾವೇರಿ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ.

ಈ ಘಟನೆಗೆ ಸಂಬಂಧಿಸಿದಂತೆ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘರ್ಷಣೆಗೆ ನಿಖರ ಕಾರಣ ಹಾಗೂ ಟಿಟಿ ವಾಹನ ಹಾಯಿಸಿ ಕೊಲೆ ಯತ್ನ ಆರೋಪ ಸೇರಿದಂತೆ ಎಲ್ಲ ಆಯಾಮಗಳ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ. ಗ್ರಾಮದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

About The Author