Political News: ಅಜ್ಜಿಯ ಅಂತಿಮ ದರ್ಶನಕ್ಕಾಗಿ ಬಂದು ಧೈರ್ಯ ತುಂಬಿದವರಿಗೆ ಕೃತಜ್ಞತೆ ಸಲ್ಲಿಸಿದ ನಿಖಿಲ್

Political News: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಪತ್ನಿ ಚೆನ್ನಮ್ಮನವರ ಅಂತ್ಯಕ್ರಿಯೆ ಇಂದು ಹರದನಹಳ್ಳಿಯಲ್ಲಿ ನೆರವೇರಿತು. ಗೌಡರ ಸಂಪ್ರದಾಯದ ಪ್ರಕಾರ, ಅಂತಿಮ ವಿಧಿವಿಧಾನಗಳು ನೆರವೇರಿದ್ದು, ಈ ವೇಳೆ ರಾಜಕೀಯ ಗಣ್ಯರು ಸೇರಿ ಅಪಾರ ಅಭಿಮಾನಿಗಳು ಭಾಗವಹಿಸಿದ್ದರು.

ಅಜ್ಜಿಯ ಅಂತಿಮ ದರ್ಶನ ಪಡೆದು ಮನೆಯವರಿಗೆಲ್ಲ ಧೈರ್ಯ ಹೇಳಿದ ಎಲ್ಲರಿಗೂ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ್ ಎಕ್ಸ್ ಖಾತೆಯ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.

ನಮ್ಮ ಕುಟುಂಬಕ್ಕೆ ಎದುರಾಗಿರುವ ಈ ಅತ್ಯಂತ ಕಷ್ಟದ ಮತ್ತು ದುಃಖದ ಸಮಯದಲ್ಲಿ, ನಮ್ಮೊಂದಿಗೆ ನಿಂತ ಪ್ರತಿಯೊಬ್ಬರಿಗೂ ನನ್ನ ಹೃದಯಪೂರ್ವಕ ಧನ್ಯವಾದಗಳು. ರಾಜ್ಯದ ಮೂಲೆ ಮೂಲೆಯಿಂದ, ಎಷ್ಟೋ ದೂರದ ಊರುಗಳಿಂದ ಆಗಮಿಸಿ ನನ್ನ ಅಜ್ಜಿಯ ಅಂತಿಮ ದರ್ಶನ ಪಡೆದು, ನಮಗೆ ಧೈರ್ಯ ತುಂಬಿದ ಪ್ರತಿಯೊಬ್ಬ ಅಭಿಮಾನಿ ಹಾಗೂ ಕಾರ್ಯಕರ್ತ ದೇವರಿಗೂ ನಾನು ಆಜೀವನ ಋಣಿಯಾಗಿರುತ್ತೇನೆ.

ನಾವು ಅವರನ್ನು ಶಾರೀರಿಕವಾಗಿ ಇಂದು ಕಳೆದುಕೊಂಡಿರಬಹುದು, ಆದರೆ ಅವರು ಜೀವಿಸಿದ ಹಾದಿ, ಅವರು ನಮಗೆ ಕಲಿಸಿದ ಮೌಲ್ಯಗಳು ಎಂದೆಂದಿಗೂ ಜೀವಂತ. ಅವರ ತತ್ತ್ವಗಳು ಮತ್ತು ತಿದ್ದಿ ತೀಡಿದ ಹಾದಿಯಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ನಿಜವಾದ ನಮನ. ಈ ಕಷ್ಟದ ಸಮಯದಲ್ಲಿ, ಅಂತಿಮ ಸಂಸ್ಕಾರದ ಪ್ರತಿಯೊಂದು ಕಾರ್ಯದಲ್ಲೂ ಭಾಗಿಯಾಗಿ, ಎಲ್ಲವೂ ಸುಸೂತ್ರವಾಗಿ ನೆರವೇರುವಂತೆ ಹಗಲಿರುಳು ಶ್ರಮಿಸಿದ ಪ್ರತಿಯೊಬ್ಬ ಕಾರ್ಯಕರ್ತ ಮಿತ್ರರಿಗೂ, ಬೆಂಬಲಿಗರಿಗೂ ಮತ್ತು ಹಿತೈಷಿಗಳಿಗೆ ನನ್ನ ಹೃದಯಪೂರ್ವಕ ಧನ್ಯವಾದಗಳು. ನಿಮ್ಮ ನಿಸ್ಸ್ವಾರ್ಥ ಸೇವೆ ಮತ್ತು ಸಮರ್ಪಣಾ ಭಾವವನ್ನು ನಾವು ಎಂದಿಗೂ ಮರೆಯುವುದಿಲ್ಲ.

ಅಷ್ಟೇ ಅಲ್ಲದೆ, ಈ ಇಳಿ ವಯಸ್ಸಿನಲ್ಲಿ ಹಿರಿಯರಾದ ತಾತನವರಿಗೆ ಈ ಅಗಾಧವಾದ ಅಗಲಿಕೆಯ ನೋವನ್ನು ತಡೆಯುವ ಮತ್ತು ಸಹಿಸುವ ಶಕ್ತಿಯನ್ನು ಆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಒಬ್ಬ ವ್ಯಕ್ತಿಯಾಗಿ ಮತ್ತು ನಮ್ಮ ಇಡೀ ಕುಟುಂಬವಾಗಿ, ಅಜ್ಜಿಯ ಆಶಯ ಹಾಗೂ ಆದರ್ಶಗಳನ್ನು ನನ್ನ ಕೊನೆಯುಸಿರಿರುವವರೆಗೂ ಮುಂದುವರಿಸಿಕೊಂಡು ಹೋಗುತ್ತೇನೆ ಎಂದು ಈ ಮೂಲಕ ವಚನ ನೀಡುತ್ತೇನೆ. ನಿಮ್ಮ ಪ್ರೀತಿ, ಬೆಂಬಲ ಮತ್ತು ಸಂತಾಪಗಳಿಗೆ ಮತ್ತೊಮ್ಮೆ ಶಿರಸಾಷ್ಟಾಂಗ ನಮಸ್ಕಾರಗಳು. ನಿಮ್ಮೆಲ್ಲರ ಪ್ರೀತಿ, ಆಸರೆ ಮತ್ತು ಬೆಂಬಲಕ್ಕೆ ನಮ್ಮ ಕುಟುಂಬ ಸದಾ ಋಣಿಯಾಗಿರುತ್ತದೆ ಎಂದು ನಿಖಿಲ್ ಕುಮಾರ್ ಹೇಳಿದ್ದಾರೆ.

About The Author