ಅಂಗನವಾಡಿ ಮಕ್ಕಳಿಗೆ ಮೊಟ್ಟೆ, ಸರ್ಕಾರಿ ಶಾಲೆ ಮಕ್ಕಳಿಗೆ ಊಟದ ವಿಷಯವಾಗಿ ಸಿಎಂ ರಾಜೀನಾಮೆ ಕೇಳಿದ ಆರ್.ಅಶೋಕ್

Political news: ಅಂಗನವಾಡಿ ಶಾಲೆಯಲ್ಲಿ ಮಕ್ಕಳಿಗೆ ತಿನ್ನಲು ಮೊಟ್ಟೆ ನೀಡಲು ಹಣವಿಲ್ಲದ ಪರಿಸ್ಥಿತಿ ಎದುರಾಗಿದೆ ಮತ್ತು ಸರ್ಕಾರಿ ಶಾಲೆ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲು ಬೇಕಾದ ಅಂಶಗಳ ಬಗ್ಗೆ ಅಪ್ಟೇಡ್ ಮಾಡಲು ಇಂಟರ್ನೆಟ್ ವ್ಯವಸ್ಥೆ ಸರಿ ಇಲ್ಲವೆಂದು ಆರೋಪಿಸಲಾಗಿದೆ.

ಈ ಆರೋಪಕ್ಕೆ ಸಂಬಂಧಿಸಿದಂತೆ, ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಧ್ವನಿ ಎತ್ತಿದ್ದು, ಸಿಎಂ ಡಿ.ಕೆ.ಶಿವಕುಮಾರ್ ಅವರ ರಾಜೀನಾಮೆ ಕೇಳಿದ್ದಾರೆ.

ಅಂಗನವಾಡಿ ಮಕ್ಕಳ ಮೊಟ್ಟೆಗೆ ದುಡ್ಡಿಲ್ಲ, ಸರ್ಕಾರಿ ಶಾಲಾ ಮಕ್ಕಳ ಊಟಕ್ಕೆ ಇಂಟರ್ನೆಟ್ ಇಲ್ಲ! ಅಂಗನವಾಡಿಗಳಿಗೆ ನೀಡಬೇಕಾದ ಪೌಷ್ಟಿಕ ಆಹಾರ ಮತ್ತು ಮೊಟ್ಟೆಯ ಬಾಕಿ ಹಣವನ್ನೇ ಬಿಡುಗಡೆ ಮಾಡದೆ, ಕೇವಲ ಘೋಷಣೆಗಳಲ್ಲೇ ದಿನ ದೂಡುತ್ತಿರುವ ಈ ಸರ್ಕಾರ, ಈಗ ಶಾಲಾ ಮಕ್ಕಳ ಬಿಸಿಯೂಟಕ್ಕೂ ‘ಇಂಟರ್ನೆಟ್’ ನೆಪವೊಡ್ಡಿ ಕತ್ತರಿ ಹಾಕುತ್ತಿದೆ! ನಿನ್ನೆ ತಾನೆ ಅಂಗನವಾಡಿಗಳ ದುಸ್ಥಿತಿ ಜಗಜ್ಜಾಹೀರಾಗಿತ್ತು; ಇಂದು ಸರ್ಕಾರಿ ಶಾಲೆಯ ಸರದಿ ಎಂದು ಆರ್.ಅಶೋಕ್ ಎಕ್ಸ್ ಖಾತೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉತ್ತರ ಕನ್ನಡದ ಅರಣ್ಯ ಹಾಗೂ ಮಲೆನಾಡು ಭಾಗಗಳಲ್ಲಿ ಇಂಟರ್ನೆಟ್ ಸಿಗುವುದಿಲ್ಲ ಎಂಬ ಕನಿಷ್ಠ ಜ್ಞಾನವೂ ಇಲ್ಲದೆ ‘ನಿರಂತರ’ ಆ್ಯಪ್ ತುರುಕಿದ್ದೀರಿ. 70 ಮಕ್ಕಳಿರುವ ಶಾಲೆಗೆ ತಾಂತ್ರಿಕ ಎಡವಟ್ಟಿನಿಂದ 40 ಮಕ್ಕಳ ಹಾಜರಾತಿ ಮಾತ್ರ ಬಿದ್ದರೆ, ಬಾಕಿ 30 ಮಕ್ಕಳು ಉಪವಾಸ ಬಳಲಬೇಕಾ? ಆ್ಯಪ್ ನೆಟ್‌ವರ್ಕ್‌ಗಾಗಿ ಶಿಕ್ಷಕರು ಪಾಠ ಬಿಟ್ಟು ಗುಡ್ಡ ಬೆಟ್ಟ ಅಲೆಯುತ್ತಿದ್ದರೆ, ಮಕ್ಕಳ ಹೊಟ್ಟೆಗೆ ಬಿಳುವ ಪೆಟ್ಟಿಗೆ ಹೊಣೆ ಯಾರು? ಎಂದು ರಾಜ್ಯ ಸರ್ಕಾರಕ್ಕೆ ಆರ್.ಅಶೋಕ್ ಪ್ರಶ್ನಿಸಿದ್ದಾರೆ.

ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ನನ್ನ ಆಗ್ರಹ: 1. ತಾಂತ್ರಿಕ ದೋಷ ಹಾಗೂ ನೆಟ್‌ವರ್ಕ್ ಸಮಸ್ಯೆ ಬಗೆಹರಿಯುವವರೆಗೆ ಭೌತಿಕ ಹಾಜರಾತಿ ಪುಸ್ತಕವನ್ನೇ (Physical Register) ಅಂತಿಮ ಮಾನದಂಡವೆಂದು ಪರಿಗಣಿಸಿ ಬಿಸಿಯೂಟದ ಅನುದಾನ ಬಿಡುಗಡೆ ಮಾಡಿ.

2. ಮೊಟ್ಟೆ, ಹಾಲಿನ ಬಾಕಿ ಹಣವನ್ನು ತಕ್ಷಣವೇ ಬಿಡುಗಡೆ ಮಾಡಿ, ಮಕ್ಕಳ ಹೊಟ್ಟೆಯ ಮೇಲೆ ಹೊಡೆಯುವುದನ್ನು ನಿಲ್ಲಿಸಿ. ಆಡಳಿತ ನಡೆಸಲು ಯೋಗ್ಯತೆ ಇಲ್ಲದಿದ್ದರೆ, ರಾಜ್ಯದ ಮಕ್ಕಳ ಭವಿಷ್ಯದ ಜೊತೆ ಚೆಲ್ಲಾಟ ಆಡೋದು ಬಿಟ್ಟು, ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಮನೆಗೆ ನಡೀರಿ ಎಂದು ಆರ್.ಅಶೋಕ್ ಆಗ್ರಹಿಸಿದ್ದಾರೆ.

About The Author