ಕೇಂದ್ರ ಸಚಿವರ ರಾಜೀನಾಮೆಯಂತೆ ರಾಜ್ಯ ಸಚಿವರು ಯಾವಾಗ ರಾಜೀನಾಮೆ ನೀಡ್ತಾರೆ?: ಆರ್.ಅಶೋಕ್ ಪ್ರಶ್ನೆ

Political News: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಪ್ರಶ್ನಿಸಿ ವಿದ್ಯಾರ್ಥಿಗಳು ದೆಹಲಿಯಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಶಿಕ್ಷಣ ಸಚಿವ ರಾಜೀನಾಮೆಗೆ ಆಗ್ರಹಿಸಿದ್ದರು. ಅದರಂತೆ ಶಿಕ್ಷಣ ಸಚಿವರಾಗಿದ್ದ ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಪ್ರಹ್ಲಾದ್ ಜೋಶಿಯವರಿಗೆ ಆ ಖಾತೆ ನಿಭಾಯಿಸಲು ನೀಡಲಾಗಿದೆ.

ಕೇಂದ್ರದಲ್ಲಿ ಸಚಿವರು ರಾಜೀನಾಮೆ ನೀಡಿದ್ದಾಯ್ತು, ರಾಜ್ಯದಲ್ಲಿ ಸಚಿವರ ರಾಜೀನಾಮೆ ಯಾವಾಗ ಪಡೆಯುತ್ತೀರಿ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಪ್ರಶ್ನಿಸಿದ್ದಾರೆ. ಈ ಬಗ್ಗೆ ಈ ರೀತಿಯಾಗಿ ಆರ್.ಅಶೋಕ್ ಸಾಲು ಸಾಲು ಪ್ರಶ್ನೆ ಕೇಳಿದ್ದಾರೆ.

ಕೇಂದ್ರದಲ್ಲಿ NEET ಪರೀಕ್ಷೆಗೆ ಸಂಬಂಧಿಸಿದ ಬೆಳವಣಿಗೆಯ ಹಿನ್ನೆಲೆಯಲ್ಲಿ ರಾಜಕೀಯ ಹಾಗೂ ಆಡಳಿತಾತ್ಮಕ ಹೊಣೆ ಹೊತ್ತು ಕೇಂದ್ರ ಸಚಿವರು ರಾಜೀನಾಮೆ ನೀಡಿದ್ದಾರೆ. ಹಾಗಾದರೆ ಕರ್ನಾಟಕದಲ್ಲಿ ನಡೆದ ಗಂಭೀರ ಘಟನೆಗಳಿಗೆ ನೈತಿಕ ಮತ್ತು ಆಡಳಿತಾತ್ಮಕ ಹೊಣೆ ಯಾರು ಹೊರುತ್ತಾರೆ?

KPSC ಪಶುವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಒಂದು ಹುದ್ದೆಗೆ ₹80 ಲಕ್ಷ ಡೀಲ್ ನಡೆದಿರುವ ಆರೋಪದ ಆಡಿಯೋ ಬಹಿರಂಗವಾಗಿದೆ. ಈ ಆರೋಪಗಳ ಕುರಿತು ಸಮಗ್ರ, ಸ್ವತಂತ್ರ ಮತ್ತು ಪಾರದರ್ಶಕ ತನಿಖೆ ಯಾವಾಗ? ಇದರ ಹೊಣೆ ಯಾರು ಹೊರುತ್ತಾರೆ? ಯಾರು ರಾಜೀನಾಮೆ ಕೊಡುತ್ತಾರೆ?

ಐಪಿಎಲ್ ವಿಜಯೋತ್ಸವದ ಕಾಲ್ತುಳಿತ ದುರಂತದಲ್ಲಿ 11 ಅಮಾಯಕ ಜೀವಗಳು ಬಲಿಯಾದವು. ಆ ದುರಂತಕ್ಕೆ ನೈತಿಕ ಮತ್ತು ಆಡಳಿತಾತ್ಮಕ ಹೊಣೆ ಯಾರು ಹೊರುತ್ತಾರೆ? ನೊಂದ ಕುಟುಂಬಗಳಿಗೆ ಸಂಪೂರ್ಣ ನ್ಯಾಯ ಯಾವಾಗ ದೊರೆಯುತ್ತದೆ? ಇದರ ಹೊಣೆ ಯಾರು ಹೊರುತ್ತಾರೆ? ಯಾರ ರಾಜೀನಾಮೆ ನೀಡುತ್ತಾರೆ?

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಕಳೆದ ಮೂರು ವರ್ಷಗಳಲ್ಲಿ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಕ್ರೋ ಫೈನಾನ್ಸ್ ಹಾವಳಿ ತಡೆಯಲಾರದೆ ನೂರಾರು ಬಡವ ಸಾಲಗಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ? ಇದಕ್ಕೆಲ್ಲ ಯಾರು ಹೊಣೆ? ಯಾರು ರಾಜೀನಾಮೆ ಕೊಡುತ್ತಾರೆ?

ಈ ರೀತಿಯಾಗಿ ಸಾಲು ಸಾಲು ಪ್ರಶ್ನೆ ಕೇಳಿರುವ ಆರ್.ಅಶೋಕ್, ಪ್ರಜಾಪ್ರಭುತ್ವದಲ್ಲಿ ಅಧಿಕಾರ ಎಂದರೆ ಕೇವಲ ಹುದ್ದೆಯಲ್ಲ; ಅದರೊಂದಿಗೆ ಜವಾಬ್ದಾರಿಯೂ ಇರುತ್ತದೆ. ತಪ್ಪುಗಳು ನಡೆದಾಗ ಅಧಿಕಾರಿಗಳ ಮೇಲೆ ಗೂಬೆ ಕೂರಿಸದೆ, ನಾಮಕಾವಸ್ತೆ ತನಿಖೆಗಳ ಹೆಸರಿನಲ್ಲಿ ತಪ್ಪಿಸಿಕೊಳ್ಳದೆ ಉತ್ತರದಾಯಿತ್ವ ಸ್ವೀಕರಿಸಬೇಕು. ಪ್ರತಿಯೊಂದು ಪ್ರಕರಣದಲ್ಲೂ ಸತ್ಯ ಹೊರಬರಬೇಕು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮವಾಗಬೇಕು ಹಾಗೂ ಜನರ ವಿಶ್ವಾಸವನ್ನು ಮರುಸ್ಥಾಪಿಸುವ ಕಾರ್ಯ ನಡೆಯಬೇಕು ಎಂದು ಆಗ್ರಹಿಸಿದ್ದಾರೆ.

About The Author