Koppala: ರಾಜ್ಯದ ಅನ್ನದಾತರ ಹಿತರಕ್ಷಣೆಗಾಗಿ ಅಂಜನಾದ್ರಿ ತನಕ ಬಿಜೆಪಿ ನಾಯಕರ ಬೈಕ್ ಜಾಥಾ

Koppala News: ಅಂಜನಾದ್ರಿ ಬೆಟ್ಟದ ಶ್ರೀ ಹನುಮಂತ ದೇವರ ದಿವ್ಯ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ, ರಾಜ್ಯದ ಸಂಕಷ್ಟದಲ್ಲಿರುವ ಅನ್ನದಾತರ ಹಿತರಕ್ಷಣೆಗಾಗಿ ಬೃಹತ್ ಹೋರಾಟಕ್ಕೆ ಇಂದು ಅಧಿಕೃತವಾಗಿ ಚಾಲನೆ ನೀಡಲಾಗಿದೆ.

ತೀವ್ರ ಅಭಾವ ಮತ್ತು ಭೀಕರ ಬರದ ಬೇಗೆಯಿಂದಾಗಿ ಕಷ್ಟಪಟ್ಟು ಬೆಳೆದ ಬೆಳೆಗಳು ರೈತರ ಕಣ್ಣೆದುರೇ ಒಣಗಿ ಹೋಗುತ್ತಿದ್ದು, ಗ್ರಾಮೀಣ ಭಾಗದ ಬದುಕು ಅತ್ಯಂತ ಶೋಚನೀಯವಾಗಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲೂ ವಿಜಯನಗರ 11A ಕಾಲುವೆಗೆ ನೀರು ಹರಿಸಲು ಸರ್ಕಾರ ನಿರಂತರ ವಿಳಂಬ ಧೋರಣೆ ತೋರುತ್ತಿರುವುದು ಅತ್ಯಂತ ಖಂಡನೀಯ ಹಾಗೂ ನಿರ್ದಯವಾದ ನಡೆಯಾಗಿದೆ.

ನೀರು ಎಂಬುದು ಪ್ರತಿಯೊಬ್ಬ ರೈತನ ನೈಸರ್ಗಿಕ ಹಕ್ಕಾಗಿದ್ದು, ರಾಜ್ಯ ಸರ್ಕಾರವು ಯಾವುದೇ ರೀತಿಯ ರಾಜಕೀಯ ಮಾಡದೇ ತಕ್ಷಣವೇ ಎಚ್ಚೆತ್ತುಕೊಂಡು ಕಾಲುವೆಗೆ ನೀರು ಹರಿಸಬೇಕು ಹಾಗೂ ಒಣಗುತ್ತಿರುವ ಬೆಳೆಗಳನ್ನು ಮತ್ತು ರೈತರ ಜೀವನವನ್ನು ರಕ್ಷಿಸಲು ತಕ್ಷಣದ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.

ಈ ನ್ಯಾಯಯುತ ಹೋರಾಟದಲ್ಲಿ ರೈತರ ಧ್ವನಿಗೆ ಧ್ವನಿಯಾಗಲು ಮಾಜಿ ಸಚಿವರಾದ ಬಿ. ಶ್ರೀರಾಮುಲು, ವಿರೋಧ ಪಕ್ಷದ ಮುಖ್ಯ ಸಚೇತಕರಾದ ಎನ್. ರವಿಕುಮಾರ್, ಶಾಸಕರಾದ ಜಿ. ಜನಾರ್ಧನರೆಡ್ಡಿ, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ್, ಮಾಜಿ ಶಾಸಕರಾದ ಪರಣ್ಣ ಮುನವಳ್ಳಿ, ಮಾಜಿ ಸಂಸದರಾದ ಶಿವರಾಮೇಗೌಡ, ಗಿರೇಗೌಡ್ರು ಸೇರಿದಂತೆ ಹಲವು ಪ್ರಮುಖ ನಾಯಕರು ಸಕ್ರಿಯವಾಗಿ ಭಾಗವಹಿಸಿದ್ದಾರೆ. ಅವರೊಂದಿಗೆ ನವೀನ ಗುಳಗಣ್ಣನವರ್, ಬಸವರಾಜ್ ಕ್ಯಾವಟರ್, ಮುಂತಾದ ಪಕ್ಷದ ಹಿರಿಯ ಮುಖಂಡರು, ನೂರಾರು ಕಾರ್ಯಕರ್ತರು ಹಾಗೂ ಸಾವಿರಾರು ಸಂಖ್ಯೆಯ ರೈತಬಾಂಧವರು ಒಗ್ಗಟ್ಟಿನಿಂದ ಉಪಸ್ಥಿತರಿದ್ದು ಹೋರಾಟಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತಪಡಿಸಿದ್ದಾರೆ. ರೈತರ ಕಣ್ಣೀರಿಗೆ ಸರಿಯಾದ ಸ್ಪಂದನೆ ಸಿಗುವವರೆಗೆ ಮತ್ತು ಅನ್ನದಾತನಿಗೆ ಸಂಪೂರ್ಣ ನ್ಯಾಯ ಸಿಗುವವರೆಗೂ ಈ ಪ್ರತಿಭಟನಾ ಹೋರಾಟವು ಯಾವುದೇ ಕಾರಣಕ್ಕೂ ನಿಲ್ಲದೆ ನಿರಂತರವಾಗಿ ಮುಂದುವರೆಯಲಿದೆ.

About The Author