Hubli News: ಜನರ ಭಕ್ತಿಯ ದುರುಪಯೋಗ: ಮಾರ್ಡನ್ ಅವಧೂತನ ಅಸಲಿ ಮುಖ ಬಯಲು

Hubli News: ಜನ ಮರಳೋ… ಜಾತ್ರೆ ಮರಳೋ… ಮಾನವ ಚಂದ್ರನ ಮೇಲೆ ವಾಸಿಸುವ ಕನಸು ಕಾಣುತ್ತಿದ್ದಾನೆ. ವಿಜ್ಞಾನ, ತಂತ್ರಜ್ಞಾನ ದಿನದಿಂದ ದಿನಕ್ಕೆ ಹೊಸ ಎತ್ತರಕ್ಕೆ ಏರುತ್ತಿದೆ. ಆದ್ರೆ, ಜನರ ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ಮೌಢ್ಯತೆಯ ಜಾಲ ಬೀಸುವವರು ಮಾತ್ರ ಇನ್ನೂ ಕಡಿಮೆಯಾಗಿಲ್ಲ.

ದೇವರ ಹೆಸರಿನಲ್ಲಿ ಭಕ್ತರ ನಂಬಿಕೆಗೆ ಕನ್ನ ಹಾಕಿ, ಸಮಸ್ಯೆಗಳಿಗೆ ಪರಿಹಾರ ನೀಡುವ ನೆಪದಲ್ಲಿ ಹಣ, ಚಿನ್ನ, ಆಸ್ತಿ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹುಬ್ಬಳ್ಳಿಯ ಈ ಮಾರ್ಡನ್ ಅವಧೂತನ ಅಸಲಿ ಮುಖವೇನು? ಈ ಕುರಿತು ನಮ್ಮ ಸ್ಪೆಷಲ್ ವರದಿ.

ಹುಬ್ಬಳ್ಳಿಯ ಗಣೇಶಪೇಟೆ ಕುಲಕರ್ಣಿ ಹಕ್ಕಲಿನಲ್ಲಿ ವಾಸವಿರುವ ಪವನ್, ತಮ್ಮ ಮೈಮೇಲೆ ಆದಿ ಮೌನೇಶ್ವರ ಹಾಗೂ ಇಮಾಮ್ ಹುಸೇನ್ ದೇವರು ಬರುತ್ತಾರೆ ಎಂದು ಹೇಳಿಕೊಂಡು, ಜನರ ಸಮಸ್ಯೆಗಳಿಗೆ ಪರಿಹಾರ ನೀಡುವುದಾಗಿ ಭಕ್ತರಲ್ಲಿ ನಂಬಿಕೆ ಮೂಡಿಸುತ್ತಿದ್ದಾರೆ ಎನ್ನಲಾಗಿದೆ.

ಇದೇ ನಂಬಿಕೆಯಿಂದ ದೂರದೂರಿನಿಂದ ಭಕ್ತರು ಇವರ ಬಳಿ ಬಂದು ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಾರೆ. ಆದರೆ, ಭಕ್ತರ ಇದೇ ನಂಬಿಕೆಯನ್ನು ದುರುಪಯೋಗಪಡಿಸಿಕೊಂಡು ಹಣ, ಚಿನ್ನ, ಬೆಳ್ಳಿ ಹಾಗೂ ಆಸ್ತಿ ಪಡೆದುಕೊಂಡಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಹುಬ್ಬಳ್ಳಿ ಮಾತ್ರವಲ್ಲ… ಧಾರವಾಡ, ಹಾವೇರಿ, ಗದಗ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲೂ ಪವನ್‌ಗೆ ಭಕ್ತರಿದ್ದಾರೆ ಎನ್ನಲಾಗುತ್ತಿದೆ.

‘ಪುಣ್ಯ ಕ್ಷೇತ್ರ’ ಹೆಸರಿನ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಧಾರ್ಮಿಕ ವಿಡಿಯೋಗಳನ್ನು ಹಂಚಿಕೊಂಡು ಭಕ್ತರನ್ನು ಸೆಳೆಯುತ್ತಿರುವ ಆರೋಪವೂ ಇದೆ.

ಇನ್ನೊಂದೆಡೆ ‘ಪವನ್ ಪ್ರಿನ್ಸ್’ ಹೆಸರಿನ ಖಾತೆಯಲ್ಲಿ ಸಿನಿಮಾ ಹಾಡುಗಳಿಗೆ ಡ್ಯಾನ್ಸ್ ಮಾಡುವುದು ಸೇರಿದಂತೆ ವೈಯಕ್ತಿಕ ಜೀವನದ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಗಣೇಶಪೇಟೆಯ ಸ್ಲಂ ಪ್ರದೇಶದ ಹಳೆಯ ಮಣ್ಣಿನ ಮನೆಯಲ್ಲಿ ದೇವರನ್ನು ಪ್ರತಿಷ್ಠಾಪಿಸಿಕೊಂಡು, ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಸಂಜೆ ಭಕ್ತರನ್ನು ಭೇಟಿ ಮಾಡುತ್ತಾರೆ ಎನ್ನಲಾಗಿದೆ.

ಭವಿಷ್ಯ ಹೇಳುವುದು, ಮೈಮೇಲೆ ದೇವರು ಬಂದಂತೆ ವರ್ತಿಸುವುದು, ಭಕ್ತರ ಸಮಸ್ಯೆಗಳನ್ನು ಆಲಿಸುವುದು… ಹೀಗೆ ಭಕ್ತರ ಕಷ್ಟಗಳನ್ನೇ ಬಂಡವಾಳ ಮಾಡಿಕೊಂಡು, ಪರಿಹಾರದ ಹೆಸರಿನಲ್ಲಿ ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇಂತಹ ಆರೋಪಗಳ ನಡುವೆಯೇ ಕೆಲ ಸಂತ್ರಸ್ತರು ಕರ್ನಾಟಕ ಟಿವಿ ಮುಂದೆ ಬಂದು ತಮ್ಮ ನೋವನ್ನು ಹಂಚಿಕೊಂಡಿದ್ದಾರೆ.

ಹುಬ್ಬಳ್ಳಿಯ ಗುಬ್ಬಿಚಾಳ ನಿವಾಸಿ ಮಹಾದೇವಿ ಹಾಗೂ ಕುಟುಂಬಸ್ಥರ ಸಮಸ್ಯೆ ಪರಿಹರಿಸುವುದಾಗಿ ಹೇಳಿ ಹಣ ಹಾಗೂ ಬೆಲೆಬಾಳುವ ವಸ್ತುಗಳನ್ನು ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇಷ್ಟೇ ಅಲ್ಲ… ಮಹಾದೇವಿ ಅವರ ಬಳಿಯಿದ್ದ ಎರಡು ಬೆಲೆಬಾಳುವ ಸೈಟ್‌ಗಳನ್ನು ಕಾನೂನುಬಾಹಿರವಾಗಿ ಪವನ್ ಅವರ ಪತ್ನಿಯ ಹೆಸರಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬಂದಿದೆ.

ತಮಗೆ ಮೋಸವಾಗಿದೆ ಎಂದು ಅರಿತ ಬಳಿಕ ಸಂತ್ರಸ್ತರು ಪವನ್‌ನಿಂದ ದೂರವಾಗಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಆದರೆ, ನ್ಯಾಯ ಕೇಳಿದ ಸಂತ್ರಸ್ತರ ವಿರುದ್ಧ ಪವನ್ ಹಾಗೂ ಕುಟುಂಬಸ್ಥರು ಗೂಂಡಾ ವರ್ತನೆ ತೋರುತ್ತಿದ್ದಾರೆ ಎಂಬ ಮತ್ತೊಂದು ಆರೋಪವೂ ಕೇಳಿಬಂದಿದೆ.

ಇನ್ನು ತಮ್ಮ ಮೇಲಿನ ಆರೋಪಗಳಿಗೆ ಮಾರ್ಡನ್ ಅವಧೂತ ಪವನ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ.

ತಮ್ಮ ಮೈಮೇಲೆ ದೇವರು ಬಂದಾಗ ತಾನು ದೇವರಾಗಿರುತ್ತೇನೆ. ದೇವರು ಬರದ ಸಂದರ್ಭದಲ್ಲಿ ಸಾಮಾನ್ಯ ಮನುಷ್ಯ ಎಂದು ಹೇಳಿಕೊಂಡಿದ್ದಾರೆ.

ಡ್ಯಾನ್ಸ್ ಮಾಡುವುದು, ಮದ್ಯಪಾನ ಮಾಡುವುದು, ಸಿಗರೇಟ್ ಸೇದುವುದು ತಮ್ಮ ವೈಯಕ್ತಿಕ ವಿಚಾರ ಎಂದು ಸಮರ್ಥಿಸಿಕೊಂಡಿರುವ ಪವನ್, ಮಹಾದೇವಿ ಅವರೊಂದಿಗೆ ನಡೆದಿರುವುದು ಖಾಸಗಿ ವ್ಯವಹಾರ ಎಂದು ಹೇಳಿದ್ದಾರೆ.

ಬದಲಾಗಿ ಮಹಾದೇವಿ ಅವರೇ ತಮಗೆ ಮೋಸ ಮಾಡಿದ್ದಾರೆ ಎಂದು ಆರೋಪವನ್ನು ತಳ್ಳಿಹಾಕಿದ್ದಾರೆ.

ದೇವರ ಮೇಲಿನ ಭಕ್ತಿ ಮತ್ತು ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ಜನರನ್ನು ವಂಚಿಸಲಾಗುತ್ತಿದೆ ಎಂಬ ಆರೋಪ ಇದೀಗ ಚರ್ಚೆಗೆ ಗ್ರಾಸವಾಗಿದೆ.

ಪವನ್ ವಿರುದ್ಧ ಕೇಳಿಬಂದಿರುವ ಆರೋಪಗಳು ಸತ್ಯವೇ? ಸುಳ್ಳೇ? ಹಣ, ಚಿನ್ನ ಹಾಗೂ ಆಸ್ತಿ ಪಡೆದುಕೊಂಡಿರುವ ಆರೋಪಗಳಲ್ಲಿ ಎಷ್ಟು ಸತ್ಯಾಂಶವಿದೆ? ಸಂತ್ರಸ್ತರ ಆರೋಪಗಳಿಗೆ ಕಾನೂನಿನಡಿ ಏನು ಉತ್ತರ ಸಿಗಲಿದೆ? ಎಂಬುದನ್ನು ತನಿಖೆಯೇ ಬಹಿರಂಗಪಡಿಸಬೇಕಿದೆ.

ಆದರೆ, ಯಾವುದೇ ವ್ಯಕ್ತಿ ದೇವರ ಹೆಸರಿನಲ್ಲಿ ಪರಿಹಾರ ನೀಡುತ್ತೇನೆ ಎಂದರೂ, ಭಾವನಾತ್ಮಕ ನಂಬಿಕೆಗೆ ಒಳಗಾಗಿ ಹಣ, ಚಿನ್ನ ಅಥವಾ ಆಸ್ತಿ ನೀಡುವ ಮುನ್ನ ಸಾರ್ವಜನಿಕರು ಎಚ್ಚರಿಕೆ ವಹಿಸುವುದು ಅಗತ್ಯ.

ಕ್ಯಾಮೆರಾಮ್ಯಾನ್ ಹೇಮಂತ್ ಕುಮಾರ್ ಜೊತೆ, ಸಂಗಮೇಶ್ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ.

About The Author