Hubli News: ಕಾವೇರಿ ನೀರು ವಿಚಾರವಾಗಿ ಕನ್ನಡಪರ ಸಂಘಟನೆಗಳು ಕರೆ ನೀಡಿರುವ ರಾಜ್ಯ ಬಂದ್ಗೆ ಇದೀಗ ಗೊಂದಲದ ವಾತಾವರಣ ನಿರ್ಮಾಣವಾಗಿದೆ. ಕಾವೇರಿ ನೀರಿನ ಸಮಸ್ಯೆ ಸದ್ಯ ಇಲ್ಲ, ಬಂದ್ ಅಗತ್ಯವಿಲ್ಲ ಎಂದು ಕೆಲ ಸಂಘಟನೆಗಳು ಹಿಂದೆ ಸರಿದಿವೆ. ಆದರೆ ಯಾರು ಬೆಂಬಲ ನೀಡಲಿ, ಬಿಡಲಿ ಬಂದ್ ಮಾಡೇ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ಪಟ್ಟು ಹಿಡಿದಿದ್ದಾರೆ. ಇದರ ನಡುವೆ ಬಂದ್ಗೆ ಹುಬ್ಬಳ್ಳಿಯಿಂದಲೇ ಬಹಿರಂಗ ಅಪಸ್ವರ ಕೇಳಿಬಂದಿದೆ.
ಕಾವೇರಿ ನೀರು ವಿಚಾರವಾಗಿ ರಾಜ್ಯದಲ್ಲಿ ಸಮಸ್ಯೆ ತಲೆದೋರಿದ ಸಂದರ್ಭದಲ್ಲಿ ಕನ್ನಡಪರ ಸಂಘಟನೆಗಳು ಉಗ್ರ ಹೋರಾಟಕ್ಕೆ ಮುಂದಾಗಿದ್ದವು. ತಮಿಳುನಾಡಿನ ನಡೆ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದು ಪ್ರತಿಭಟನೆ ನಡೆಸಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಇದೇ 13ರಂದು ರಾಜ್ಯ ಬಂದ್ಗೆ ಕರೆ ನೀಡಲಾಗಿತ್ತು.
ಆದರೆ ಇದೀಗ ಮಳೆ ಹೆಚ್ಚಾಗಿ ಜಲಾಶಯಗಳ ಒಳಹರಿವು ಕೂಡ ಹೆಚ್ಚಿರುವ ಹಿನ್ನೆಲೆಯಲ್ಲಿ ಕಾವೇರಿ ನೀರಿನ ಸಮಸ್ಯೆಗೆ ಪ್ರಕೃತಿಯೇ ಪರಿಹಾರ ನೀಡಿದಂತಾಗಿದೆ. ಎರಡೂ ರಾಜ್ಯಗಳ ರೈತರಿಗೂ ಕೊಂಚ ನೆಮ್ಮದಿ ಮೂಡಿದೆ.
ಹೀಗಿದ್ದರೂ ಬಂದ್ ಕರೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎನ್ನುತ್ತಿದ್ದಾರೆ ವಾಟಾಳ್ ನಾಗರಾಜ್. ಕಾವೇರಿ ಮಾತ್ರವಲ್ಲ, ಮೇಕೆದಾಟು ಹಾಗೂ ಮಹದಾಯಿ ವಿಚಾರದಲ್ಲೂ ಕರ್ನಾಟಕಕ್ಕೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಬಂದ್ಗೆ ಪಟ್ಟು ಹಿಡಿದಿದ್ದಾರೆ.
ಮತ್ತೊಂದೆಡೆ ಬೆಂಗಳೂರು ಸೇರಿದಂತೆ ಹಲವು ಕನ್ನಡಪರ ಸಂಘಟನೆಗಳು, ಖಾಸಗಿ ಶಾಲೆಗಳು ಹಾಗೂ ವ್ಯಾಪಾರಸ್ಥರು ಬಂದ್ಗೆ ಬೆಂಬಲ ಇಲ್ಲ ಎಂದು ಹೇಳುತ್ತಿದ್ದಾರೆ. ಹೀಗಾಗಿ ಇದೇ 13ರಂದು ಬಂದ್ ನಡೆಯುತ್ತಾ? ಇಲ್ಲವಾ? ಎಂಬ ಗೊಂದಲ ರಾಜ್ಯದ ಜನರಲ್ಲಿ ಮೂಡಿದೆ.
ಒಂದೆಡೆ ಬಂದ್ಗೆ ವಿರೋಧ ವ್ಯಕ್ತವಾಗುತ್ತಿದ್ದರೂ, ಮತ್ತೊಂದೆಡೆ ವಾಟಾಳ್ ನಾಗರಾಜ್ ತಮ್ಮ ಘೋಷಣೆಯಂತೆ ಬಂದ್ಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಹುಬ್ಬಳ್ಳಿಗೆ ಭೇಟಿ ನೀಡಿದ ವಾಟಾಳ್ ನಾಗರಾಜ್, ಮಹದಾಯಿ ಹೋರಾಟಗಾರರು ಹಾಗೂ ವಿವಿಧ ರೈತಪರ ಸಂಘಟನೆಗಳ ಬೆಂಬಲ ಕೋರಿದ್ದಾರೆ. ಚೆನ್ನಮ್ಮ ವೃತ್ತದಲ್ಲಿ ಮಹದಾಯಿ ಹೋರಾಟಗಾರರು ಹಾಗೂ ರೈತಪರ ಸಂಘಟನೆಗಳೊಂದಿಗೆ ಸಾಂಕೇತಿಕ ಹೋರಾಟ ನಡೆಸಿ, ಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಾರೆ.
ಬಂದ್ಗೆ ಯಾರು ಬೆಂಬಲ ನೀಡಲಿ, ಬಿಡಲಿ ಹೋರಾಟ ಮುಂದುವರಿಸುತ್ತೇವೆ. ಬೆಳಗಾವಿಯಿಂದ ಚಾಮರಾಜನಗರದವರೆಗೂ ಬಂದ್ಗೆ ಬೆಂಬಲವಿದೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ. ಇನ್ನು ವಾಟಾಳ್ ನಾಗರಾಜ್ ನೇತೃತ್ವದ ಸಭೆಯಲ್ಲೇ ಬಂದ್ಗೆ ವಿರೋಧದ ಧ್ವನಿ ಮೊಳಗಿದೆ. ಉತ್ತರ ಕರ್ನಾಟಕ ಆಟೋಚಾಲಕರ ಸಂಘದ ಸದಸ್ಯರು ಸಭೆಗೆ ನುಗ್ಗಿ ಬಂದ್ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮಧ್ಯಪ್ರವೇಶಿಸಿ ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ.
ರಾಜ್ಯದಲ್ಲಿ ಸದ್ಯ ಯಾವುದೇ ಕಾವೇರಿ ನೀರಿನ ಸಮಸ್ಯೆ ಇಲ್ಲ. ಮಹದಾಯಿ ಹಾಗೂ ಮೇಕೆದಾಟು ಹೋರಾಟಕ್ಕೆ ನೈತಿಕ ಬೆಂಬಲವಿದೆ. ಆದರೆ ಬಂದ್ ಹೆಸರಿನಲ್ಲಿ ವಿದ್ಯಾರ್ಥಿಗಳು, ವ್ಯಾಪಾರಸ್ಥರು ಹಾಗೂ ಜನಸಾಮಾನ್ಯರಿಗೆ ತೊಂದರೆ ನೀಡುವುದು ಸರಿಯಲ್ಲ ಎಂದು ಆಟೋಚಾಲಕರ ಸಂಘ ಅಸಮಾಧಾನ ವ್ಯಕ್ತಪಡಿಸಿದೆ.
ಬಂದ್ಗೆ ನಮ್ಮ ಬೆಂಬಲ ಇಲ್ಲ, ಬಂದ್ ನಡೆಯಲು ಬಿಡುವುದಿಲ್ಲ ಎಂದು ಕರ್ನಾಟಕ ಆಟೋಚಾಲಕರ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಹೇಳಿದ್ದಾರೆ. ಒಟ್ಟಿನಲ್ಲಿ ಮಳೆ ಬಂತು… ನೀರಿನ ಸಮಸ್ಯೆ ಕಡಿಮೆಯಾಯಿತು… ಆದರೂ ಬಂದ್ ಗೊಂದಲ ಮಾತ್ರ ಬಗೆಹರಿದಿಲ್ಲ.
ಒಂದು ಕಡೆ ಬಂದ್ ಮಾಡೇ ಮಾಡುತ್ತೇವೆ ಎಂದು ವಾಟಾಳ್ ನಾಗರಾಜ್ ಬಣ ಪಟ್ಟು ಹಿಡಿದಿದೆ. ಮತ್ತೊಂದು ಕಡೆ ಬಂದ್ಗೆ ಬೆಂಬಲ ಇಲ್ಲ, ಬಂದ್ ನಡೆಯಲು ಬಿಡುವುದಿಲ್ಲ ಎಂದು ಮತ್ತೊಂದು ಬಣ ವಿರೋಧಿಸುತ್ತಿದೆ.
ಹೀಗಾಗಿ ಇದೇ 13ರಂದು ರಾಜ್ಯ ಬಂದ್ ನಡೆಯುತ್ತಾ? ಬಂದ್ಗೆ ಎಷ್ಟು ಸಂಘಟನೆಗಳು ಬೆಂಬಲ ನೀಡುತ್ತವೆ? ಎಂಬ ಕುತೂಹಲ ಇದೀಗ ರಾಜ್ಯದ ಜನರಲ್ಲಿ ಮೂಡಿದೆ. ಕನ್ನಡಪರ ಸಂಘಟನೆಗಳ ಮುಖಂಡರು ಈ ಗೊಂದಲಕ್ಕೆ ತೆರೆ ಎಳೆದು ಸ್ಪಷ್ಟ ನಿರ್ಧಾರ ಕೈಗೊಳ್ಳಬೇಕಿದೆ.
ಕ್ಯಾಮೆರಾಮ್ಯಾನ್ ಹೇಮಂತ್ ಕುಮಾರ್ ಜೊತೆ ಸಂಗಮೇಶ್ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ.




