“ಭ್ರಷ್ಟಾಚಾರಿಗಳನ್ನು ಬಡಿದು ಹಾಕುವೆ!” – ಇದು ಶತಮಾನದ ಅತ್ಯಂತ ದೊಡ್ಡ ಜೋಕ್!: ಆರ್.ಅಶೋಕ್

Political News: ಸಿಎಂ ಡಿ.ಕೆ.ಶಿವಕುಮಾರ್ ಅವರು ಭ್ರಷ್ಟಾಚಾರಿಗಳನ್ನು ಬಡಿದು ಹಾಕುವೆ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಬಗ್ಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವ್ಯಂಗ್ಯವಾಡಿದ್ದು, ಈ ಹೇಳಿಕೆ ಜೋಕ್ ಎಂದಿದ್ದಾರೆ.

ಒಂದೆಡೆ ಸಚಿವ ಸಂಪುಟದಲ್ಲಿ ಸಾಲು ಸಾಲು ಭ್ರಷ್ಟರು, ಕಳಂಕಿತರು, ಹಗರಣಗಳ ರೂವಾರಿಗಳನ್ನೇ ಕೂರಿಸಿಕೊಂಡು, ಇನ್ನೊಂದೆಡೆ “ಭ್ರಷ್ಟಾಚಾರ ಮಾಡುವವರನ್ನು ಬಡಿದು ಹಾಕುವೆ” ಎಂದು ಸಿಎಂ ಡಿ.ಕೆ.ಶಿವಕುಮಾರ್ ಅವರು ನೀಡಿರುವ ಹೇಳಿಕೆ ಜೋಕ್ ಆಫ್ ದ ಸೆಂಚುರಿ! ಬೇವಿನ ಮರ ತೋರಿಸಿ ಮಾವಿನ ಹಣ್ಣು ಕಿತ್ತು ಕೊಡುತ್ತೇನೆ ಅಂದ ಹಾಗಾಯಿತು ನಿಮ್ಮ ಮಾತು!

ನಿಮ್ಮ ಭ್ರಷ್ಟ, ಕ್ರಿಮಿನಲ್ ಹಿನ್ನೆಲೆ ಇರುವ ಸಚಿವರ ಸಾಧನೆಯ ಪಟ್ಟಿ ಇಲ್ಲಿದೆ ನೋಡಿ:

  • ಬಿ. ನಾಗೇಂದ್ರ: ₹187 ಕೋಟಿ ವಾಲ್ಮೀಕಿ ನಿಗಮ ಹಗರಣದ ಸಿಬಿಐ ಚಾರ್ಜ್‌ಶೀಟ್ ಆರೋಪಿ!
  • ಜಮೀರ್ ಅಹಮದ್: ಮನೆ ಹಂಚಿಕೆ ಹಗರಣ, IMA ಆಸ್ತಿ ಮಾರಾಟ ಮತ್ತು ರಾಜೀವ್ ಗಾಂಧಿ ವಸತಿ ನಿಗಮ ಹಗರಣದ ಕಳಂಕಿತ!
  • ಸಂತೋಷ್ ಲಾಡ್: ಕಾರ್ಮಿಕ ಇಲಾಖೆಯ ಹೆಲ್ತ್ ಕಿಟ್ ಹಗರಣದಲ್ಲಿ ಹೈಕೋರ್ಟ್‌ನಿಂದಲೇ ಛೀಮಾರಿ ಹಾಕಿಸಿಕೊಂಡವರು!
  • ಮಧು ಬಂಗಾರಪ್ಪ: ಚೆಕ್ ಬೌನ್ಸ್ ಪ್ರಕರಣದಲ್ಲಿ ದೋಷಿ, ಶಿಕ್ಷಣ ಇಲಾಖೆಯನ್ನೇ ಅಯೋಮಯಗೊಳಿಸಿದ ನಾಯಕ!
  • ವಿಜಯಾನಂದ ಕಾಶಪ್ಪನವರ್: ಪತ್ರಕರ್ತರಿಗೆ ಬೆದರಿಕೆ, ವಿರೋಧಿಗಳ ಮೇಲೆ ನಕಲಿ ಕೇಸ್ ಹಾಕಿ ಗೂಂಡಾಗಿರಿ ನಡೆಸುತ್ತಿರುವವರು!
  • ಕೆ.ಎಂ. ಶಿವಲಿಂಗೇಗೌಡ: ಸದನದಲ್ಲೇ ಅಸಂಸದೀಯ ಪದ ಬಳಸಿ ಶಾಸಕಾಂಗದ ಗೌರವವನ್ನೇ ಹರಾಜು ಹಾಕಿದ ಎಲುಬಿಲ್ಲದ ನಾಲಿಗೆ!

ಸಿಎಂ ಸಾಹೇಬ್ರೇ… ನಕಲಿ ಬಿಲ್, ಡಬಲ್ ಬಿಲ್ ಮಾಡುವವರನ್ನು ಆಮೇಲೆ ಬಡಿದು ಹಾಕಿ. ಮೊದಲು ಕೋಟಿ ಕೋಟಿ ಸಾರ್ವಜನಿಕರ ಹಣ ಲೂಟಿ ಮಾಡಿ ನಿಮ್ಮ ಪಕ್ಕದಲ್ಲೇ ಸಚಿವರಾಗಿ ಮೆರೆಯುತ್ತಿರುವ ಭ್ರಷ್ಟರನ್ನು ಸಂಪುಟದಿಂದ ಹೊರಗೆ ಬಡಿದು ಹಾಕಿ! ಅರ್ಹತೆಗೆ ಜಾಗವಿಲ್ಲ, ನೈತಿಕತೆಗೆ ಜಾಗವಿಲ್ಲ! ಭ್ರಷ್ಟರಿಗೆ, ಅನರ್ಹರಿಗೆ ಸಚಿವ ಸ್ಥಾನ ಕೊಟ್ಟು ಮೆರೆಸುವುದೇ ನಿಮ್ಮ “ಕೊತ್ವಾಲ್ ಮಾಡೆಲ್” ಆಡಳಿತವೇ? ಎಂದು ಆರ್.ಅಶೋಕ್ ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

About The Author