ಇಂದಿನ ಯುವ ಜನತೆಯಲ್ಲಿ ರೀಲ್ಸ್ ಮತ್ತು ಇನ್‌ಫ್ಲುಯೆನ್ಸರ್‌ಗಳ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಆದರೆ, ಈ ರೀಲ್ಸ್ ಯುಗದ ಜೆನ್-ಝಿ (GenZ) ಯುವಕರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಒಂದು ವಿಶೇಷ ಹಾಗೂ ಅತ್ಯಂತ ಸ್ಟ್ರಾಂಗ್ ಮೆಸೇಜ್ ನೀಡಿದ್ದಾರೆ. ಜೀವನದಲ್ಲಿ ಎಂದಿಗೂ ಶಾರ್ಟ್‌ಕಟ್‌ಗಳ ಹಿಂದೆ ಓಡಬೇಡಿ ಎಂದು ಎಚ್ಚರಿಸಿರುವ ಮೋದಿ, “ಶಾರ್ಟ್‌ಕಟ್ ನಿಮ್ಮ ಜೀವನವನ್ನೇ ಕಡಿತಗೊಳಿಸುತ್ತದೆ” ಎಂಬ ಖಡಕ್ ಸಂದೇಶ ರವಜಿಸಿದ್ದಾರೆ.
ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಆತ್ಮಚರಿತ್ರೆ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ರೈಲ್ವೆ ಹಳಿ ದಾಟಲು ಶಾರ್ಟ್‌ಕಟ್ ಹುಡುಕಿದರೆ ಎಷ್ಟು ಅಪಾಯಕಾರಿಯೋ, ಜೀವನದಲ್ಲೂ ಅಷ್ಟೇ ಡೇಂಜರ್ ಎಂದು ಎಚ್ಚರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಭಿನ್ನ ದಿಕ್ಕುಗಳಿಗೆ ಸೆಳೆಯುವ ಪ್ರಭಾವಿಗಳ ಮಾತುಗಳಿಗೆ ಕುರುಡಾಗಿ ಬೀಳಬೇಡಿ. ಕೆಲವೇ ಸೆಕೆಂಡ್‌ಗಳಲ್ಲಿ ಯಶಸ್ಸು ಅಥವಾ ಫೇಮ್ ಸಿಗುತ್ತದೆ ಎಂಬ ಭ್ರಮೆಯನ್ನು ಬಿಟ್ಟು, ದೀರ್ಘಕಾಲದ ಪರಿಶ್ರಮ ಮತ್ತು ಹಿರಿಯರ ಜೀವನ ಚರಿತ್ರೆಯಿಂದ ಕಲಿಯುವಂತೆ ಯುವಜನತೆಗೆ ಕಿವಿಮಾತು ಹೇಳಿದ್ದಾರೆ.
ಆದರೆ ಈ ಮಾತನ್ನು ಕೇವಲ ರೀಲ್ಸ್ ವಿರುದ್ಧದ ಎಚ್ಚರಿಕೆ ಎಂದು ಮಾತ್ರ ನೋಡಲುಸಾಧ್ಯವಿಲ್ಲ; ಇದರ ಹಿಂದೆ ದೊಡ್ಡ ರಾಜಕೀಯ ಹಿನ್ನೆಲೆಯೂ ಇದೆ. ಇತ್ತೀಚಿನ ದಿನಗಳಲ್ಲಿ NEET-UG ಸೇರಿದಂತೆ ವಿವಿಧ ಪರೀಕ್ಷಾ ಅಕ್ರಮಗಳ ವಿರುದ್ಧ ದೇಶಾದ್ಯಂತ ವಿದ್ಯಾರ್ಥಿಗಳು ಭಾರಿ ಪ್ರತಿಭಟನೆ ನಡೆಸಿದ್ದರು. ಇನ್‌ಸ್ಟಾಗ್ರಾಂ ಹಾಗೂ ಸೋಶಿಯಲ್ ಮೀಡಿಯಾ ಮೂಲಕವೇ ಸಂಘಟಿತರಾದ ಯುವಕರು ಸರ್ಕಾರದ ಮೇಲೆ ತೀವ್ರ ಒತ್ತಡ ಹೇರಿದ್ದರು. ಇದು ಸೋಶಿಯಲ್ ಮೀಡಿಯಾ ಕೇವಲ ಮನರಂಜನೆಯಲ್ಲ, ಬದಲಿಗೆ ದೊಡ್ಡ ರಾಜಕೀಯ ಬದಲಾವಣೆ ತರುವ ಅಸ್ತ್ರ ಎಂಬುದನ್ನು ಸಾಬೀತುಪಡಿಸಿತ್ತು. ಇತ್ತ ಸರ್ಕಾರಿ ನಾಯಕರಿಗೂ ಇನ್‌ಸ್ಟಾಗ್ರಾಂ ಮೂಲಕ ಯುವಕರೊಂದಿಗೆ ಕನೆಕ್ಟ್ ಆಗುವಂತೆ ಮೋದಿ ಸಲಹೆ ನೀಡಿದ್ದಾರೆ. ಅಂದರೆ ಡಿಜಿಟಲ್ ವೇದಿಕೆಯನ್ನು ಸಕಾರಾತ್ಮಕವಾಗಿ ಬಳಸಿ, ಆದರೆ ಶಾರ್ಟ್‌ಕಟ್ ಸಂಸ್ಕೃತಿಗೆ ಬಲಿಯಾಗಬೇಡಿ ಎಂಬುದೇ ಇದರ ಮುಖ್ಯ ಸಾರಾಂಶವಾಗಿದೆ.
ರೀಲ್ಸ್ ಕೆಲವೇ ಸೆಕೆಂಡ್‌ಗಳಲ್ಲಿ ಮುಗಿದುಹೋಗಬಹುದು, ಆದರೆ ಭವಿಷ್ಯವನ್ನು ಯಶಸ್ವಿಯಾಗಿ ರೂಪಿಸಿಕೊಳ್ಳಲು ಕಠಿಣ ಪರಿಶ್ರಮವೇ ಏಕೈಕ ದಾರಿ ಎನ್ನುವುದನ್ನು ಪ್ರಧಾನಿ ಮೋದಿ ಯುವಕರಿಗೆ ನೆನಪಿಸಿಕೊಟ್ಟಿದ್ದಾರೆ.




