ಅಪಘಾತದ ಸಂತ್ರಸ್ತರಿಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಸಾಂತ್ವನ: ಸರ್ಕಾರದಿಂದ ಪರಿಹಾರದ ಭರವಸೆ

Bidar News: ಬೀದರ್: ನೆರೆಯ ತೆಲಂಗಾಣದ ಜಹೀರಾಬಾದ್ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೀದರ್ ದಕ್ಷಿಣ ಕ್ಷೇತ್ರದ ರಾಜಗೀರಾ ಗ್ರಾಮದ ಆರು ಜನ ಮೃತಪಟ್ಟಿರುವ ಘಟನೆಗೆ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರ ಕುಟುಂಬಸ್ಥರನ್ನು ಭೇಟಿ ಮಾಡಿದ ಅವರು, ಕುಟುಂಬದವರ ದುಃಖದಲ್ಲಿ ಭಾಗಿಯಾಗಿ ಸಾಂತ್ವನ ಹೇಳಿದರು. ಒಂದೇ ಗ್ರಾಮದ ಆರು ಅಮೂಲ್ಯ ಜೀವಗಳನ್ನು ಕಳೆದುಕೊಂಡಿರುವುದು ಅತ್ಯಂತ ದುಃಖಕರ ಹಾಗೂ ಹೃದಯವಿದ್ರಾವಕ ಘಟನೆ ಎಂದು ತಿಳಿಸಿದ ಶಾಸಕರು, ಸಂಕಷ್ಟದ ಸಂದರ್ಭದಲ್ಲಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು.

ಮೃತರ ಕುಟುಂಬಗಳಿಗೆ ಸರ್ಕಾರದ ವತಿಯಿಂದ ದೊರೆಯಬೇಕಾದ ಪರಿಹಾರವನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ, ಪರಿಹಾರ ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸಲು ಪ್ರಯತ್ನಿಸುವುದಾಗಿ ಡಾ. ಶೈಲೇಂದ್ರ ಬೆಲ್ದಾಳೆ ಅವರು ಕುಟುಂಬಸ್ಥರಿಗೆ ಭರವಸೆ ನೀಡಿದರು.

ಬಳಿಕ ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು, ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಗಾಯಾಳುಗಳ ಕುಟುಂಬಸ್ಥರೊಂದಿಗೆ ಮಾತನಾಡಿ, ಅವರ ಆರೋಗ್ಯ ಸ್ಥಿತಿ ಹಾಗೂ ಚಿಕಿತ್ಸೆಗೆ ಸಂಬಂಧಿಸಿದ ಮಾಹಿತಿಯನ್ನು ಪಡೆದುಕೊಂಡರು.

ಬ್ರಿಮ್ಸ್ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯಿಂದ ಗಾಯಾಳುಗಳ ಆರೋಗ್ಯ ಪರಿಸ್ಥಿತಿ, ನೀಡಲಾಗುತ್ತಿರುವ ಚಿಕಿತ್ಸೆ, ಅಗತ್ಯ ಔಷಧೋಪಚಾರ ಮತ್ತು ವೈದ್ಯಕೀಯ ಸೌಲಭ್ಯಗಳ ಕುರಿತು ಮಾಹಿತಿ ಪಡೆದ ಶಾಸಕರು, ಗಾಯಾಳುಗಳಿಗೆ ಅತ್ಯುತ್ತಮ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು.

About The Author