ಬೀದರ್‌ ನಲ್ಲಿ ಶೂಟ್‌ಔಟ್ ಮಾಡಿ 83 ಲಕ್ಷ ದರೋಡೆ ಪ್ರಕರಣ: ದರೋಡೆಕೋರರ ಬಂಧನ

Bidar News: 2025ರ ಜನವರಿ 16ರಂದು ಬೀದರ್‌ ನಗರದ ಹೃದಯಭಾಗದಲ್ಲೇ ಈ ಶೂಟ್‌ಔಟ್‌ ನಡೆದಿತ್ತು. ಎಟಿಎಂಗೆ ಹಣ ತುಂಬಿಸಲು ತೆರಳುತ್ತಿದ್ದ ಸಿಎಂಎಸ್‌ ವಾಹನವನ್ನು ಗುರಿಯಾಗಿಸಿಕೊಂಡಿದ್ದ ದರೋಡೆಕೋರರು, ಇಬ್ಬರ ಮೇಲೆ ಗುಂಡು ಹಾರಿಸಿ 83 ಲಕ್ಷ ರೂಪಾಯಿ ಹಣವನ್ನು ದೋಚಿಕೊಂಡು ಪರಾರಿಯಾಗಿದ್ದರು. ಗುಂಡಿನ ದಾಳಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದರೆ, ಮತ್ತೋರ್ವ ಗಾಯಗೊಂಡಿದ್ದರು.

ಘಟನೆ ಬಳಿಕ ಆರೋಪಿಗಳ ಪತ್ತೆಗೆ ಬೀದರ್‌ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದರು. ಬರೋಬ್ಬರಿ 19 ತಿಂಗಳ ಕಾಲ ತನಿಖೆ ಮುಂದುವರಿಸಿದ್ದ ಪೊಲೀಸರು ಇದೀಗ ಪ್ರಕರಣದ ಪ್ರಮುಖ ಆರೋಪಿಗಳಾದ ಅಲೋಕ್‌ ಮತ್ತು ಅಮನ್‌ ಎಂಬ ಇಬ್ಬರನ್ನು ಬಿಹಾರದಲ್ಲಿ ಬಂಧಿಸಿದ್ದಾರೆ. ಬೀದರ್‌ ಎಸ್‌ಪಿ ಪ್ರದೀಪ್‌ ಗುಂಟೆ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಬಳಿಕ ಆರೋಪಿಗಳನ್ನು ಬೀದರ್‌ಗೆ ಕರೆತರಲಾಗುತ್ತಿದ್ದು, ಪ್ರಕರಣದ ತನಿಖೆ ಮತ್ತಷ್ಟು ಚುರುಕುಗೊಂಡಿದೆ.

ಇನ್ನು ಆರೋಪಿಗಳ ಬಂಧನದ ಸುದ್ದಿ ಹೊರಬೀಳುತ್ತಿದ್ದಂತೆ ಬೀದರ್‌ ಪೊಲೀಸರ ಕಾರ್ಯಾಚರಣೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಘಟನೆ ನಡೆದ ಸ್ಥಳದ ಸಮೀಪ ಹಾಗೂ ಎಸ್‌ಪಿ ನಿವಾಸದ ಬಳಿಯೂ ಪೊಲೀಸ್‌ ಸಿಬ್ಬಂದಿ ಪಟಾಕಿ ಸಿಡಿಸಿ, ಸಿಹಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಹಾಡುಹಗಲೇ ನಡೆದಿದ್ದ ಈ ದರೋಡೆ ಪ್ರಕರಣ ಪೊಲೀಸರಿಗೆ ದೊಡ್ಡ ಸವಾಲಾಗಿತ್ತು. ಇದೀಗ ಬರೋಬ್ಬರಿ 19 ತಿಂಗಳ ಬಳಿಕ ಆರೋಪಿಗಳು ಬಿಹಾರದಲ್ಲಿ ಸಿಕ್ಕಿಬಿದ್ದಿರುವುದು ತನಿಖೆಗೆ ಮಹತ್ವದ ಮುನ್ನಡೆ ಸಿಕ್ಕಂತಾಗಿದೆ. 83 ಲಕ್ಷ ದರೋಡೆ, ಹಾಡುಹಗಲೇ ಶೂಟ್‌ಔಟ್‌, ಒಬ್ಬರ ಸಾವು, ಮತ್ತೊಬ್ಬರಿಗೆ ಗಾಯ… ಇಡೀ ರಾಜ್ಯದ ಗಮನ ಸೆಳೆದಿದ್ದ ಪ್ರಕರಣಕ್ಕೆ ಕೊನೆಗೂ ಬ್ರೇಕ್‌ ಬಿದ್ದಿದೆ. ಆರೋಪಿಗಳನ್ನು ಬೀದರ್‌ಗೆ ಕರೆತಂದ ಬಳಿಕ ವಿಚಾರಣೆ ನಡೆಸಲಾಗುತ್ತಿದ್ದು, ದರೋಡೆಗೆ ಸಂಬಂಧಿಸಿದ ಇನ್ನಷ್ಟು ಸತ್ಯಗಳು ಹೊರಬರುವ ಸಾಧ್ಯತೆಯಿದೆ.

About The Author