Haveri: ಶಾಲಾ ಮಕ್ಕಳಿಗೆ ವಿತರಿಸಲಾದ ಶೂಗಳ ಗುಣಮಟ್ಟ ಪರಿಶೀಲನೆಗೆ ನಿರ್ಧಾರ

Haveri: ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಶೂ, ಸಾಕ್ಸ್ ವಿತರಣೆ ಆರೋಪಕ್ಕೆ ಸಂಬಂಧಿಸಿದಂತೆ ಪಾಲಕರು ಹಾಗೂ ಮಕ್ಕಳು ವಿರೋಧ ವ್ಯಕ್ತಪಡಿಸಿದ್ದರು. ಮಕ್ಕಳಿಗೆ ವಿತರಿಸಲಾದ ಶೂಗಳು ಕೆಲವೇ ದಿನಗಳಲ್ಲಿ ಹಾಳಾಗುತ್ತಿವೆ, ಗುಣಮಟ್ಟ ಕಳಪೆಯಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣ ಇದೀಗ ಲೋಕಾಯುಕ್ತದ ಮೆಟ್ಟಿಲೇರಿದ್ದು, ಲೋಕಾಯುಕ್ತದಲ್ಲಿ ಸುಮೋಟೋ ಕೇಸ್ ಕೂಡ ದಾಖಲಾಗಿತ್ತು.

ಇದೀಗ ಪ್ರಕರಣದ ಬೆನ್ನಲ್ಲೇ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಶಾಲಾ ಮಕ್ಕಳಿಗೆ ವಿತರಿಸಲಾದ ಶೂಗಳ ಗುಣಮಟ್ಟ ಪರಿಶೀಲನೆಗೆ ಮುಂದಾಗಿದ್ದಾರೆ. ಧಾರವಾಡ ಜಿಲ್ಲೆಯ ಏಳು ತಾಲೂಕುಗಳಿಂದ ಶೂಗಳ ಸ್ಯಾಂಪಲ್‌ಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ.

ಧಾರವಾಡ, ಹುಬ್ಬಳ್ಳಿ, ಕಲಘಟಗಿ, ಕುಂದಗೋಳ, ನವಲಗುಂದ, ಅಣ್ಣಿಗೇರಿ ಹಾಗೂ ಅಳ್ನಾವರ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸಂಗ್ರಹಿಸಲಾದ ಶೂಗಳ ಸ್ಯಾಂಪಲ್‌ಗಳನ್ನು ಗುಣಮಟ್ಟ ಪರೀಕ್ಷೆಗಾಗಿ ಬೆಂಗಳೂರಿನ ಮೈನಾರಿಟಿ ಆಯುಕ್ತರ ಕಚೇರಿಗೆ ರವಾನಿಸಲಾಗಿದೆ.

ಶೂಗಳ ಗುಣಮಟ್ಟ ಮಾತ್ರವಲ್ಲದೆ, ಮಕ್ಕಳಿಗೆ ವಿತರಿಸಲು ನಿಗದಿಪಡಿಸಿರುವ ಮಾನದಂಡಗಳನ್ನು ಪೂರೈಸಲಾಗಿದೆಯೇ, ಶೂಗಳ ತಯಾರಿಕೆಯಲ್ಲಿ ಬಳಸಿರುವ ವಸ್ತುಗಳ ಗುಣಮಟ್ಟ ಹೇಗಿದೆ ಎಂಬುದರ ಬಗ್ಗೆಯೂ ಪರೀಕ್ಷೆ ನಡೆಸಲಾಗುತ್ತಿದೆ.

ಈ ಹಿಂದೆ ಕಳಪೆ ಗುಣಮಟ್ಟದ ಶೂ, ಸಾಕ್ಸ್ ವಿತರಿಸಲಾಗಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇದೀಗ ಅಧಿಕಾರಿಗಳು ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿರುವುದು ಮಹತ್ವ ಪಡೆದುಕೊಂಡಿದೆ.

ಇನ್ನು ಬೆಂಗಳೂರಿನಿಂದ ಬರಲಿರುವ ಟೆಸ್ಟಿಂಗ್ ವರದಿಯ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ವರದಿಯಲ್ಲಿ ಶೂಗಳ ಗುಣಮಟ್ಟ ನಿಗದಿತ ಮಾನದಂಡಕ್ಕೆ ಅನುಗುಣವಾಗಿದೆಯೇ ಅಥವಾ ಇಲ್ಲವೇ ಎಂಬುದು ಸ್ಪಷ್ಟವಾಗಲಿದೆ.

ಒಂದು ವೇಳೆ ಗುಣಮಟ್ಟದಲ್ಲಿ ಲೋಪ ಕಂಡುಬಂದರೆ, ಮುಂದಿನ ಹಂತದಲ್ಲಿ ಅಧಿಕಾರಿಗಳು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. ಸದ್ಯ ಟೆಸ್ಟಿಂಗ್ ವರದಿಗಾಗಿ ಅಧಿಕಾರಿಗಳು ಹಾಗೂ ಮಕ್ಕಳ ಪಾಲಕರು ಕಾಯುತ್ತಿದ್ದಾರೆ.

ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿರುವ ಕಳಪೆ ಶೂ ಪ್ರಕರಣಕ್ಕೆ ಇದೀಗ ಟೆಸ್ಟಿಂಗ್ ವರದಿ ಮತ್ತಷ್ಟು ಮಹತ್ವ ಪಡೆದುಕೊಂಡಿದ್ದು, ಬೆಂಗಳೂರಿನಿಂದ ಬರುವ ವರದಿ ಬಳಿಕ ಪ್ರಕರಣದ ಮುಂದಿನ ಬೆಳವಣಿಗೆ ಏನು ಎಂಬುದು ಸ್ಪಷ್ಟವಾಗಲಿದೆ.

About The Author