Hubli News: ಸೆಪ್ಟೆಂಬರ್ 29ರಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಹುಬ್ಬಳ್ಳಿ ನಿವಾಸದ ಮುಂದೆ ಬೃಹತ್ ಪ್ರತಿಭಟನೆ ನಡೆಸಲು ಕರ್ನಾಟಕ ರಾಜ್ಯ ರೈತ ಸೇನೆ ಕರೆ ನೀಡಿದೆ.
ಹುಬ್ಬಳ್ಳಿಯ ಚನ್ನಮ್ಮ ವೃತ್ತದಿಂದ ಆರಂಭವಾಗಲಿರುವ ರೈತರ ಪ್ರತಿಭಟನಾ ಮೆರವಣಿಗೆ, ಕೇಂದ್ರ ಸಚಿವರ ನಿವಾಸದವರೆಗೆ ಸಾಗಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಕಬ್ಬು ಬೆಳೆಗಾರರು ಹಾಗೂ ರೈತ ಸಂಘಟನೆಗಳ ಮುಖಂಡರು ಹೋರಾಟದಲ್ಲಿ ಭಾಗವಹಿಸಲಿದ್ದಾರೆ.
ಕಬ್ಬಿಗೆ ಪ್ರತಿ ಟನ್ಗೆ 5 ಸಾವಿರದ 500 ರೂಪಾಯಿ ಬೆಲೆ ನಿಗದಿ ಮಾಡಬೇಕು… ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿಗೆ ತರಬೇಕು… ರೈತರ ಬೇಡಿಕೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು ಎಂಬುದು ಹೋರಾಟಗಾರರ ಪ್ರಮುಖ ಆಗ್ರಹ.
ಸರ್ಕಾರದ ಗಮನ ಸೆಳೆಯಲು ಈ ಬಾರಿ ಬೃಹತ್ ಶಕ್ತಿ ಪ್ರದರ್ಶನಕ್ಕೆ ರೈತ ಸಂಘಟನೆಗಳು ಸಜ್ಜಾಗಿವೆ. ಸುಮಾರು ನಾಲ್ಕು ಲಕ್ಷ ರೈತರು ಜಮಾವಣೆಗೊಳ್ಳುವ ನಿರೀಕ್ಷೆ ಇದೆ ಎಂದು ಹೋರಾಟಗಾರರು ತಿಳಿಸಿದ್ದಾರೆ.
ಒಂದೆಡೆ ಕಬ್ಬು ನುರಿಸುವ ಹಂಗಾಮು ಸಮೀಪಿಸುತ್ತಿದೆ… ಮತ್ತೊಂದೆಡೆ ಬೆಲೆ ನಿಗದಿ ವಿಚಾರವಾಗಿ ರೈತರ ಆಕ್ರೋಶ ಹೆಚ್ಚಾಗಿದೆ. ಹೀಗಾಗಿ ಸೆಪ್ಟೆಂಬರ್ 29ರ ರೈತರ ಹೋರಾಟ ಸರ್ಕಾರಕ್ಕೆ ಮತ್ತೊಂದು ಸವಾಲಾಗುವ ಸಾಧ್ಯತೆ ಇದೆ.




