ವಿಧಾನಸಭೆಯಲ್ಲಿ ಸದಾ ಮುಂಚೂಣಿಯ ಮೊದಲ ಸಾಲಿನಲ್ಲಿ ಕುಳಿತುಕೊಂಡು ಪ್ರಭಾವಿ ನಾಯಕನಂತೆ ಮೆರೆದಿದ್ದ ಆ ದಿಗ್ಗಜ ನಾಯಕ, ಇಂದು ಕಡೆಯ ಸಾಲಿಗೆ ಬಂದು ಕುಳಿತುಕೊಂಡಿರುವುದು ಯಾಕೆ ಎಂಬ ಪ್ರಶ್ನೆ ಈಗ ಮೂಡಿದೆ. ಕರ್ನಾಟಕ ರಾಜಕಾರಣದ ಈ ಬಿಗ್ ಟರ್ನ್ ನೋಡಿದರೆ ನಿಜಕ್ಕೂ ಯಾರಾದರೂ ಹುಬ್ಬೇರಿಸಬೇಕಾಗುತ್ತದೆ. ಹೌದು, ರಾಜಕಾರಣ ಎನ್ನುವುದು ಸದಾ ಚಂಚಲವಾದದ್ದು; ಇಲ್ಲಿ ಯಾವ ಕ್ಷಣದಲ್ಲಿ ಬೇಕಾದರೂ ರಾಜಕೀಯ ಸಮೀಕರಣಗಳು ತಲೆಕೆಳಗಾಗಬಹುದು ಎಂಬುದಕ್ಕೆ ಇವತ್ತಿನ ವಿಧಾನಸಭೆ ಅಧಿವೇಶನವೇ ಅತ್ಯುತ್ತಮ ಉದಾಹರಣೆಯಾಗಿದೆ.
ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ಹಿರಿಯ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಸದನಕ್ಕೆ ಕಾಲಿಟ್ಟಿದ್ದಾರೆ. ಅಧಿವೇಶನದ ಮೊದಲ ದಿನ ಅವರು ಕಲಾಪಕ್ಕೆ ಗೈರಾಗಿದ್ದು ರಾಜ್ಯಾದ್ಯಂತ ದೊಡ್ಡ ಸುದ್ದಿಯಾಗಿತ್ತು. ಆದರೆ ಎರಡನೇ ದಿನ ಅಧೀವೇಶನಕ್ಕೆ ಆಗಮಿಸಿದ ಸಿದ್ದರಾಮಯ್ಯ ಅವರು ಎಲ್ಲರಿಗೂ ಅಚ್ಚರಿ ಮೂಡಿಸಿದರು. ಯಾಕೆಂದರೆ, ಎಂದೆಂದೂ ಅತ್ಯಂತ ಪವರ್ಫುಲ್ ಆಗಿ ಸಭಾಂಗಣದ ಮೊದಲ ಸಾಲಿನಲ್ಲಿ ರಾರಾಜಿಸುತ್ತಿದ್ದ ಅವರು, ಈ ಬಾರಿ ಬಂದು ಆಸೀನರಾಗಿದ್ದು ಮಾತ್ರ ಸದನದ ತೀರಾ ಕೊನೆಯ ಸಾಲಿನ ಬ್ರೆಂಚ್ನಲ್ಲಿ ಎಂಬುದು ಗಮನಾರ್ಹ.
ಒಂದಾನಕ ಕಾಲದಲ್ಲಿ ವಿರೋಧ ಪಕ್ಷದ ನಾಯಕನಾಗಿ ಸರ್ಕಾರದ ವಿರುದ್ಧ ಗರ್ಜಿಸಿದವರು, ಮೈತ್ರಿ ಸರ್ಕಾರದ ಸಮನ್ವಯ ಸಮಿತಿಯ ಚುಕ್ಕಾಣಿ ಹಿಡಿದವರು, ಕೊನೆಗೆ ಪೂರ್ಣ ಪ್ರಮಾಣದ ಮುಖ್ಯಮಂತ್ರಿಯಾಗಿ ಇಡೀ ಸದನವನ್ನೇ ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದ ಅದೇ ಸಿದ್ದರಾಮಯ್ಯ… ಇಂದು ಯಾವುದೇ ಅಧಿಕಾರದ ಗತ್ತು ಹಾಗೂ ಗಮ್ಮತ್ತಿಲ್ಲದೆ, ಒಬ್ಬ ಸಾಮಾನ್ಯ ಶಾಸಕರ ಸರಳತೆಯಲ್ಲಿ ಕೊನೆಯ ಬೆಂಚ್ನಲ್ಲಿ ಕುಳಿತುಕೊಂಡಿದ್ದರು. ಇನ್ನು ಇಲ್ಲಿ ಮತ್ತೊಂದು ಕಡೆ ಸಂಪೂರ್ಣ ದೃಶ್ಯವೇ ಬದಲಾಗಿ ಹೋಗಿದೆ. ಸಿದ್ದರಾಮಯ್ಯ ಅವರು ಬಿಟ್ಟುಹೋದ ಆ ಪ್ರಭಾವಿ ಕುರ್ಚಿಯಲ್ಲಿ ಈಗ ಡಿ.ಕೆ. ಶಿವಕುಮಾರ್ ಅವರು ನೂತನ ಮುಖ್ಯಮಂತ್ರಿಯಾಗಿ ವಿರಾಜಮಾನರಾಗಿದ್ದಾರೆ. ಕಾಲ ಬದಲಾಗಿದೆ, ಕುರ್ಚಿ ಬದಲಾಗಿದೆ, ಅದರೊಂದಿಗೆ ಇಡೀ ರಾಜಕೀಯ ಆಟದ ಕಹಾನಿಯೇ ಬದಲಾಗಿ ಹೋಗಿದೆ ಎಂದು ವಿಶ್ಲೇಷಿಸಬಹುದಾಗಿದೆ.
ಆದರೂ ಸಿದ್ದರಾಮಯ್ಯ ಅವರ ರಾಜಕೀಯ ತೂಕ ಹಾಗೂ ಗೌರವಕ್ಕೆ ಯಾವುದೇ ಅಳತೆಗೋಲು ಬೇಕಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ಅವರು ಕೊನೆಯ ಸಾಲಿನಲ್ಲಿ ಕುಳಿತಿದ್ದಾರೆ ಎಂಬುದು ತಿಳಿಯುತ್ತಿದ್ದಂತೆ, ಆಡಳಿತ ಪಕ್ಷದ ಶಾಸಕರು ಹಾಗೂ ಸಚಿವರು ಓಡಿಬಂದು ಅವರ ಕುಶಲೋಪರಿ ವಿಚಾರಿಸಿದರು. ಮಾಜಿ ಸಿಎಂ ಅವರ ಕಾನೂನು ಸಲಹೆಗಾರರಾಗಿದ್ದ ಎ.ಎಸ್. ಪೊನ್ನಣ್ಣ ಸೇರಿದಂತೆ ಅನೇಕ ಪ್ರಮುಖ ಸಚಿವರು ಹಾಗೂ ಹಿರಿಯ ನಾಯಕರು ಅವರ ಬಳಿ ಬಂದು ವಿಶೇಷವಾಗಿ ಮಾತುಕತೆ ನಡೆಸಿ ತಮ್ಮ ಗೌರವವನ್ನು ಸೂಚಿಸಿದರು.
ಎದುರಾಳಿ ರಾಜಕೀಯ ಪಕ್ಷದವರಿಗೆ ನಡುಕ ಹುಟ್ಟಿಸುತ್ತಿದ್ದ ಆ ಸಿಂಹದ ಹೆಜ್ಜೆಗಳು ಇಂದು ಸದನದ ಕೊನೆಯ ಸಾಲಿಗೆ ಬಂದು ನಿಂತಿರಬಹುದು. ಆದರೆ ರಾಜಕೀಯದ ಈ ಹೊಸ ಅಧ್ಯಾಯದಲ್ಲೂ ಸಹ ಸಿದ್ದರಾಮಯ್ಯ ಅವರ ಮೇಲಿರುವ ಜನಪ್ರಿಯತೆ ಹಾಗೂ ಕ್ರೇಜ್ ಮಾತ್ರ ಸ್ವಲ್ಪವೂ ಕಮ್ಮಿಯಾಗಿಲ್ಲ ಎಂಬುದೇ ಇವತ್ತಿನ ವಿಧಾನಸಭೆ ಕಲಾಪದ ಅತಿ ದೊಡ್ಡ ಹೈಲೈಟ್ ಆಗಿ ಹೊರಹೊಮ್ಮಿದೆ.




