ಜೈಲಿನೊಳಗೆ 2ನೇ ಬಾರಿ ಮೊಬೈಲ್ ಪತ್ತೆ – ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು FIR;

ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಭದ್ರತಾ ಲೋಪಗಳು ಮತ್ತೆರಡು ಹೆಜ್ಜೆ ಮುಂದುವರೆದಿವೆ! ಅತ್ಯಾಚಾರ ಪ್ರಕರಣದ ವಿಚಾರಣಾಧೀನ ಕೈದಿಯಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಳಿ ಮತ್ತೊಮ್ಮೆ ಮೊಬೈಲ್ ಫೋನ್ ಸಿಕ್ಕಿಬಿದ್ದಿದೆ ಅಂತ ಕೇಳಿ ಬರ್ತಿದೆ. ಹೌದು ‘ಇತ್ತೀಚೆಗಷ್ಟೇ ಸಿಸಿಬಿ ದಾಳಿ ವೇಳೆ ಫೋನ್ ಪತ್ತೆಯಾಗಿ ಪ್ರಕರಣ ದಾಖಲಾಗಿದ್ದ ಬೆನ್ನಲ್ಲೇ, ಇದೀಗ ಎರಡನೇ ಬಾರಿಗೆ ಜೈಲಿನಲ್ಲಿ ಫೋನ್ ಪತ್ತೆಯಾಗಿರುವುದು ತೀವ್ರ ಸಂಚಲನ ಮೂಡಿಸಿದೆ.

ಕಾರಾಗೃಹದ ‘ಸಿ’ ಬ್ಯಾರಕ್‌ನ ಕೊಠಡಿ ಸಂಖ್ಯೆ 2ರಲ್ಲಿ ಜೈಲು ಸಿಬ್ಬಂದಿ ಹಾಗೂ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾಗ, ಗೋಡೆಯ ಮೇಲಿದ್ದ ದೇವರ ಫೋಟೋದ ಹಿಂಭಾಗದಲ್ಲಿ ಅಡಗಿಸಿಡಲಾಗಿದ್ದ ಮೊಬೈಲ್ ಪತ್ತೆಯಾಗಿದೆ.

ಪತ್ತೆಯಾದ ಮೊಬೈಲ್ ಸ್ವಿಚ್ ಆಫ್ ಆಗಿದ್ದು, ಅದರಲ್ಲಿ ಸಿಮ್ ಕಾರ್ಡ್ ಇರಲಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಕಟ್ಟುನಿಟ್ಟಿನ ಕಾವಲಿರುವ ಜೈಲಿಗೆ ಈ ಫೋನ್ ಹೇಗೆ ತಲುಪಿತು? ಇದರ ಹಿಂದೆ ಜೈಲು ಸಿಬ್ಬಂದಿಯ ಕೈವಾಡವಿದೆಯೇ ಎಂಬ ನಿಟ್ಟಿನಲ್ಲಿ ಪೊಲೀಸರು ಈಗ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಈ ಸಂಬಂಧ ಪ್ರಜ್ವಲ್ ರೇವಣ್ಣ ವಿರುದ್ಧ ಮತ್ತೊಂದು ಹೊಸ ಎಫ್‌ಐಆರ್ ದಾಖಲಾಗಿದೆ.

ಜೈಲಿನಲ್ಲಿ ಮೊಬೈಲ್ ಪತ್ತೆಯಾದ ಬೆನ್ನಲ್ಲೇ, ಜೈಲು ಡಿಜಿಪಿ ಅಲೋಕ್ ಕುಮಾರ್ ಅವರು ಪರಪ್ಪನ ಅಗ್ರಹಾರ ಜೈಲಿಗೆ ದಿಢೀರ್ ಭೇಟಿ ನೀಡಿ ಪ್ರಜ್ವಲ್ ರೇವಣ್ಣ ಅವರನ್ನು ವಿಚಾರಣೆ ನಡೆಸಿದ್ದಾರೆ.

ಪ್ರಜ್ವಲ್ ಇದ್ದ ಬ್ಯಾರಕ್‌ನಲ್ಲಿ ಸುಮಾರು 10ರಿಂದ 12 ನಿಮಿಷಗಳ ಕಾಲ ಕಳೆದ ಡಿಜಿಪಿ ಅಲೋಕ್ ಕುಮಾರ್, ಪ್ರಜ್ವಲ್ ಮೇಲೆ ತೀವ್ರವಾಗಿ ಗರಂ ಆಗಿದ್ದಾರೆ. “ನಿಮ್ಮಿಂದ ಇಡೀ ಇಲಾಖೆಗೆ ಮುಜುಗರವಾಗಿದೆ. ನೀವು ನನ್ನನ್ನು ತಲೆ ತಗ್ಗಿಸುವಂತೆ ಮಾಡಿದ್ದೀರಿ” ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೆ, “ಮೊಬೈಲ್ ನಿಮಗೆ ಕೊಟ್ಟವರು ಯಾರು? ಈ ವಿಚಾರದಲ್ಲಿ ನಾಟಕ ಮಾಡಬೇಡಿ, ಮಾಹಿತಿ ನೀಡದಿದ್ದರೆ ಬೇರೆ ರೀತಿಯ ಕ್ರಮ ಕೈಗೊಳ್ಳಬೇಕಾಗುತ್ತದೆ” ಎಂದು ಕಡಕ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗ್ತಿದೆ! ಆದರೆ ಪ್ರಜ್ವಲ್ ರೇವಣ್ಣ ಮಾತ್ರ ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿಕೊಂಡಿದ್ದಾರೆ ಎನ್ನುವ ಮಾಹಿತಿ ಹೊರ ಬಿದ್ದಿದೆ!

ಕಟ್ಟುನಿಟ್ಟಿನ ಭದ್ರತೆ ಇರಬೇಕಾದ ಕೇಂದ್ರ ಕಾರಾಗೃಹದೊಳಗೆ ಪದೇಪದೆ ಮೊಬೈಲ್ ಪತ್ತೆಯಾಗುತ್ತಿರುವುದು ರಾಜ್ಯದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ ನೋಡಿ. ಈ ಘಟನೆಯ ಕುರಿತು ನಿಮ್ಮ ಅನಿಸಿಕೆಗಳೇನು? ಕಮೆಂಟ್ ಮಾಡಿ ತಿಳಿಸಿ.

About The Author