OBC ವಿಚಾರದಲ್ಲಿ ಕೇಂದ್ರಕ್ಕೆ ಸಂಕಷ್ಟ? ಕಾಂಗ್ರೆಸ್ ಸ್ಫೋಟಕ ಆರೋಪ!

ದೇಶದಲ್ಲಿ ಈಗ ಜಾತಿ ಗಣತಿ ವಿಚಾರ ಹೊಸ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ. ಜನಗಣತಿಯಿಂದ ಹಿಂದುಳಿದ ವರ್ಗಗಳನ್ನು ಅಂದರೆ ಒಬಿಸಿ ಸಮುದಾಯವನ್ನು ಬೇಕಂತಲೇ ಕೈಬಿಡಲಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಪಕ್ಷ ಗಂಭೀರ ಆರೋಪ ಮಾಡಿದೆ.

ಈ ಕುರಿತು ಮಾತನಾಡಿರುವ ಕಾಂಗ್ರೆಸ್ ಒಬಿಸಿ ಘಟಕದ ಅಧ್ಯಕ್ಷ ‘ಅನಿಲ್ ಜೈಹಿಂದ್’, ಕೇಂದ್ರ ಸರ್ಕಾರದ ವಿರುದ್ಧ ತೀವ್ರವಾಗಿ ಕಿಡಿಕಾರಿದ್ದಾರೆ. ಇತ್ತೀಚೆಗೆ ಕೇಂದ್ರ ಸರ್ಕಾರ ಹೊರಡಿಸಿದ ಜನಗಣತಿ ಅಧಿಸೂಚನೆಯ ಪ್ರಶ್ನಾವಳಿಯಲ್ಲಿ, ಒಬಿಸಿ ವರ್ಗದವರಿಗಾಗಿ ಯಾವುದೇ ಪ್ರತ್ಯೇಕ ಕಾಲಂ ಸೇರಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ. ಇದು ಸಾಮಾಜಿಕ ನ್ಯಾಯದ ತತ್ವಗಳ ದೊಡ್ಡ ಉಲ್ಲಂಘನೆ ಎಂದಿದ್ದಾರೆ.

ಒಬಿಸಿ ಸಮುದಾಯದ ನಿಜವಾದ ಜನಸಂಖ್ಯೆಯ ಅಂಕಿ-ಅಂಶಗಳು ಹೊರಬಾರದಂತೆ ತಡೆಯಲು ಮೋದಿ ಸರ್ಕಾರ ದೊಡ್ಡ ಪಿತೂರಿ ನಡೆಸುತ್ತಿದೆ ಎಂದು ಅನಿಲ್ ಜೈಹಿಂದ್ ದೂರಿದ್ದಾರೆ. ಹೌದು ‘ವೈಜ್ಞಾನಿಕವಾಗಿ ಮತ್ತು ಪಾರದರ್ಶಕವಾಗಿ ಜಾತಿ ಗಣತಿ ಮಾಡುವುದನ್ನು ಬಿಟ್ಟು, ಒಬಿಸಿಗಳನ್ನು ಅಧಿಕೃತ ಅಂಕಿಅಂಶಗಳಿಂದ ಹೊರಗಿಡುವ ಈ ಪ್ರಯತ್ನವು ಸರ್ಕಾರದ ‘ಮನುವಾದಿ ಸಂಸ್ಕೃತಿ’ಯನ್ನು ತೋರಿಸುತ್ತದೆ ಎಂದು ಅವರು ತೀವ್ರವಾಗಿ ವಾಗ್ದಾಳಿ ನಡೆಸಿದರು.

ಕಳೆದ ಆಗಸ್ಟ್ 14ರಂದು ಕೇಂದ್ರ ಸರ್ಕಾರ ಹೊರಡಿಸಿದ ಅಧಿಸೂಚನೆಯನ್ನು ಉಲ್ಲೇಖಿಸಿರುವ ಕಾಂಗ್ರೆಸ್, ಪ್ರಶ್ನಾವಳಿಯ 10ನೇ ಪ್ರಶ್ನೆಯಲ್ಲಿ ಹಿಂದುಳಿದ ವರ್ಗಗಳ ನಮೂನೆಗೆ ಜಾಗವಿಲ್ಲದಿರುವುದೇ ಈ ವಿವಾದಕ್ಕೆ ಮುಖ್ಯ ಕಾರಣ ಎಂದು ಹೇಳಿದೆ. ಈ ನಡೆ ಈಗ ರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ ಅಂತ ಹೇಳಬಹುದು!

ಜಾತಿ ಗಣತಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಈ ನಡೆ ಮುಂದಿನ ದಿನಗಳಲ್ಲಿ ಯಾವ ರಾಜಕೀಯ ತಿರುವು ಪಡೆದುಕೊಳ್ಳಲಿದೆ ಎಂಬುದನ್ನ ಕಾದು ನೋಡೋಣ. ಈ ಬಗ್ಗೆ ನಿಮ್ಮ ಅನಿಸಿಕೆ ಏನೆಂದು ಕಾಮೆಂಟ್ ಮಾಡಿ..

About The Author