ವರಮಹಾಲಕ್ಷ್ಮಿ ಹಬ್ಬಕ್ಕೆ ಚಿನ್ನದ ಶಾಕ್ – ಇಂದಿನ ಬಂಗಾರ & ಬೆಳ್ಳಿ ದರ ಇಲ್ಲಿದೆ!

ಜುಲೈನಲ್ಲಿ ಏರಿಳಿತದ ಹಾದಿಯಲ್ಲಿದ್ದ ಚಿನ್ನದ ಬೆಲೆ ಆಗಸ್ಟ್‌ನಲ್ಲಿ ಮತ್ತೆ ಏರುಗತಿ ಕಂಡಿದ್ದು, ಇದೀಗ ಸತತವಾಗಿ ಬೆಲೆ ಹೆಚ್ಚಾಗುತ್ತಿದೆ. ಕಳೆದ ಎರಡು ವಾರಗಳಲ್ಲಿ ಚಿನ್ನದ ದರ ಪ್ರತಿ ಗ್ರಾಂಗೆ ₹1,000ಕ್ಕೂ ಹೆಚ್ಚು ಏರಿಕೆಯಾಗಿದ್ದು, ಗ್ರಾಹಕರಿಗೆ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಿದೆ. ಇದೇ ವೇಳೆ ಬೆಳ್ಳಿ ದರ ಮಾತ್ರ ಸದ್ಯಕ್ಕೆ ಸ್ಥಿರವಾಗಿದೆ.

ಲಭ್ಯವಿರುವ ಮಾರುಕಟ್ಟೆ ಮಾಹಿತಿಯ ಪ್ರಕಾರ, ಆಗಸ್ಟ್ 11ರಿಂದ ಚಿನ್ನದ ಬೆಲೆ ಸತತವಾಗಿ ಏರಿಕೆಯಾಗುತ್ತಿದೆ. ಆಗಸ್ಟ್ 13ರಂದು ಮಾತ್ರ ಅಲ್ಪ ಪ್ರಮಾಣದ ಇಳಿಕೆ ಕಂಡುಬಂದಿದ್ದು, ಬಳಿಕ ಆಗಸ್ಟ್ 14ರಿಂದ ಮತ್ತೆ ಬೆಲೆ ಏರಿಕೆ ಮುಂದುವರಿದಿದೆ.

ಇಂದು 24 ಕ್ಯಾರೆಟ್‌ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹23 ಏರಿಕೆಯಾಗಿದ್ದು, ₹15,589ಕ್ಕೆ ತಲುಪಿದೆ. 22 ಕ್ಯಾರೆಟ್‌ ಚಿನ್ನದ ದರ ಪ್ರತಿ ಗ್ರಾಂಗೆ ₹20 ಹೆಚ್ಚಳವಾಗಿ ₹14,290 ಆಗಿದೆ. ಇನ್ನು 18 ಕ್ಯಾರೆಟ್‌ ಚಿನ್ನದ ಬೆಲೆ ಪ್ರತಿ ಗ್ರಾಂಗೆ ₹16 ಏರಿಕೆಯಾಗಿದ್ದು, ₹11,692ಕ್ಕೆ ತಲುಪಿದೆ. ಚಿನ್ನದ ಬೆಲೆಯ ಏರಿಕೆಯ ನಡುವೆ ಪ್ಲಾಟಿನಂ ಆಭರಣಗಳ ದರವೂ ಹೆಚ್ಚಳವಾಗಿದ್ದು, 10 ಗ್ರಾಂಗೆ ₹53,670 ಇದೆ.

ಇನ್ನು ಬೆಳ್ಳಿ ದರದಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ. ಆಗಸ್ಟ್ 11ರಂದು ಒಂದು ಕೆಜಿ ಬೆಳ್ಳಿ ₹10,000 ಏರಿಕೆಯಾಗಿ ₹2.55 ಲಕ್ಷಕ್ಕೆ ತಲುಪಿತ್ತು. ಬಳಿಕ ಆಗಸ್ಟ್ 14ರಂದು ₹5,000 ಇಳಿಕೆಯಾಗಿ ₹2.50 ಲಕ್ಷಕ್ಕೆ ಬಂದಿತ್ತು. ಅಂದಿನಿಂದ ಇದುವರೆಗೆ ಇದೇ ದರ ಮುಂದುವರಿದಿದೆ. ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ದರಗಳು ತಕ್ಷಣ ಇಳಿಕೆಯಾಗುವ ಸಾಧ್ಯತೆ ಕಡಿಮೆ ಎಂದು ವರ್ತಕರು ಅಭಿಪ್ರಾಯಪಟ್ಟಿದ್ದಾರೆ. ಅದರಲ್ಲೂ ಆಗಸ್ಟ್ 21ರಂದು ವರಮಹಾಲಕ್ಷ್ಮಿ ಹಬ್ಬ ಇರುವ ಹಿನ್ನೆಲೆಯಲ್ಲಿ ಈ ವಾರ ಚಿನ್ನ ಮತ್ತು ಬೆಳ್ಳಿ ಖರೀದಿಗೆ ಬೇಡಿಕೆ ಹೆಚ್ಚಾಗುವ ನಿರೀಕ್ಷೆಯಿದೆ.

About The Author