ಕೈಯಲ್ಲಿ ಕೌಶಲ್ಯವಿದ್ದರೆ ಬದುಕಿನಲ್ಲಿ ರಾಜಯೋಗ – ಡಿ.ಕೆ. ಶಿವಕುಮಾರ್

ಬೆಂಗಳೂರು: “ಕೈಯಲ್ಲಿ ಕೌಶಲ್ಯವಿದ್ದರೆ, ಬದುಕಿನಲ್ಲಿ ರಾಜಯೋಗವಿದ್ದಂತೆ” ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಆಯೋಜಿಸಲಾಗಿದ್ದ ‘ವಿಶ್ವ ಯುವ ಕೌಶಲ್ಯ ದಿನಾಚರಣೆ–2026’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯುವಜನರ ಭವಿಷ್ಯ ರೂಪಿಸುವಲ್ಲಿ ಕೌಶಲ್ಯಾಭಿವೃದ್ಧಿ ಪ್ರಮುಖ ಪಾತ್ರ ವಹಿಸುತ್ತದೆ. ಇಂದಿನ ಉದ್ಯೋಗ ಮಾರುಕಟ್ಟೆಯಲ್ಲಿ ಕೇವಲ ಶೈಕ್ಷಣಿಕ ಅರ್ಹತೆಗಿಂತಲೂ ನಿರ್ದಿಷ್ಟ ಕ್ಷೇತ್ರದಲ್ಲಿ ಹೊಂದಿರುವ ಕೌಶಲ್ಯಕ್ಕೆ ಹೆಚ್ಚಿನ ಬೇಡಿಕೆಯಿದೆ. ಯುವಕರು ತಮ್ಮ ಆಸಕ್ತಿ ಮತ್ತು ಸಾಮರ್ಥ್ಯಕ್ಕೆ ಅನುಗುಣವಾಗಿ ಕೌಶಲ್ಯ ಬೆಳೆಸಿಕೊಂಡು ಉದ್ಯೋಗ ಪಡೆಯುವುದರ ಜೊತೆಗೆ ಉದ್ಯಮಿಗಳಾಗಬೇಕು ಎಂಬ ಸಂದೇಶವನ್ನು ಕಾರ್ಯಕ್ರಮದಲ್ಲಿ ನೀಡಲಾಯಿತು.

ರಾಜ್ಯದಲ್ಲಿ ಯುವಕರಿಗೆ ವಿವಿಧ ಕ್ಷೇತ್ರಗಳಲ್ಲಿ ಅಗತ್ಯವಿರುವ ತರಬೇತಿ ನೀಡುವುದು, ಉದ್ಯಮಶೀಲತೆಗೆ ಉತ್ತೇಜನ ನೀಡುವುದು ಹಾಗೂ ಜೀವನೋಪಾಯದ ಅವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರದ ವತಿಯಿಂದ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಕೌಶಲ್ಯ ತರಬೇತಿ ಪಡೆದ ಯುವಕರಿಗೆ ಉದ್ಯೋಗಾವಕಾಶಗಳೊಂದಿಗೆ ಸಂಪರ್ಕ ಕಲ್ಪಿಸುವುದು ಮತ್ತು ಸ್ವಯಂ ಉದ್ಯೋಗ ಆರಂಭಿಸಲು ಅಗತ್ಯ ನೆರವು ನೀಡುವ ಮೂಲಕ ಅವರನ್ನು ಸ್ವಾವಲಂಬಿಗಳನ್ನಾಗಿ ಮಾಡುವ ಉದ್ದೇಶಕ್ಕೂ ಸರ್ಕಾರ ಒತ್ತು ನೀಡುತ್ತಿದೆ.

ಕಾರ್ಯಕ್ರಮದಲ್ಲಿ ಸಚಿವರಾದ ಡಾ. ಶರಣಪ್ರಕಾಶ್ ಪಾಟೀಲ್, ರುದ್ರಪ್ಪ ಲಮಾಣಿ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಕಾಂತಾ ನಾಯಕ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರಾದ ಎಚ್.ಎಂ. ರೇವಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಸೇರಿದಂತೆ ಇಲಾಖೆಯ ಉನ್ನತ ಅಧಿಕಾರಿಗಳು ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು.

ಕೌಶಲ್ಯ ಹೊಂದಿದ ಯುವಶಕ್ತಿಯನ್ನು ರಾಜ್ಯದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ಬಳಸಿಕೊಳ್ಳುವ ಮೂಲಕ ಉದ್ಯೋಗ ಸೃಷ್ಟಿ ಹಾಗೂ ಸ್ವಾವಲಂಬನೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯವಿದೆ ಎಂಬ ಅಭಿಪ್ರಾಯ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

About The Author