Hubli News: ಹುಬ್ಬಳ್ಳಿಯ ಹಳೇ ಹುಬ್ಬಳ್ಳಿಯಲ್ಲಿ ಭವಾನಿ ಶಂಕರ ದೇವಾಲಯದ ಪುಷ್ಕರಣಿ ವಿಚಾರ ಇದೀಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ಪುಷ್ಕರಣಿ ಜಾಗದಲ್ಲಿ ಅನಧಿಕೃತವಾಗಿ ರಸ್ತೆ ನಿರ್ಮಿಸಲಾಗಿದೆ ಎಂದು ಹಿಂದೂಪರ ಸಂಘಟನೆಗಳು ಆರೋಪಿಸಿ, ರಸ್ತೆ ತೆರವುಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿವೆ. ಪ್ರತಿಭಟನಾಕಾರರು ಪೊಲೀಸರ ಬ್ಯಾರಿಕೇಡ್ ಭೇದಿಸಿ ದೇವಸ್ಥಾನದತ್ತ ಸಾಗಲು ಯತ್ನಿಸಿದ ಹಿನ್ನೆಲೆಯಲ್ಲಿ ಹಲವು ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಸದ್ಯ ಹಳೇ ಹುಬ್ಬಳ್ಳಿಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ.
ಇದು ಹಳೇ ಹುಬ್ಬಳ್ಳಿ.. ಒಂದೆಡೆ ಪುರಾತನ ಭವಾನಿ ಶಂಕರ ದೇವಾಲಯ.. ಮತ್ತೊಂದೆಡೆ ಮಸೀದಿ.. ಇವೆರಡರ ನಡುವಿನ ಸೂಕ್ಷ್ಮ ಪ್ರದೇಶದಲ್ಲೇ ಇದೀಗ ಪುಷ್ಕರಣಿ ವಿಚಾರ ವಿವಾದಕ್ಕೆ ಕಾರಣವಾಗಿದೆ. ದೇವಾಲಯದ ಮುಂಭಾಗದಲ್ಲಿದ್ದ ಪುರಾತನ ಪುಷ್ಕರಣಿ ಜಾಗವನ್ನು ಒತ್ತುವರಿ ಮಾಡಿಕೊಂಡು ರಸ್ತೆ ನಿರ್ಮಿಸಲಾಗಿದೆ ಎಂಬುದು ಹಿಂದೂಪರ ಸಂಘಟನೆಗಳ ಆರೋಪ. ಪಾಲಿಕೆ ಅಧಿಕಾರಿಗಳು ನಿಯಮ ಉಲ್ಲಂಘಿಸಿ ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಿದ್ದಾರೆ ಎಂದು ಆರೋಪಿಸಿರುವ ಪ್ರತಿಭಟನಾಕಾರರು, ತಕ್ಷಣ ರಸ್ತೆ ತೆರವುಗೊಳಿಸಿ ಪುಷ್ಕರಣಿ ಜಾಗವನ್ನು ಸಂರಕ್ಷಿಸುವಂತೆ ಆಗ್ರಹಿಸಿದ್ದಾರೆ.
ಚನ್ನಪೇಟೆ ಗಾರ್ಡನ್ ಬಳಿ ಪ್ರತಿಭಟನೆ ಆರಂಭಿಸಿದ ಹಿಂದೂಪರ ಕಾರ್ಯಕರ್ತರು, ಕೈಯಲ್ಲಿ ಪ್ಲೇ ಕಾರ್ಡ್ ಹಿಡಿದು ‘ಪುಷ್ಕರಣಿ ಉಳಿಸಿ, ಭವಾನಿ ಶಂಕರ ಕೀರ್ತಿ ಬೆಳಸಿ’ ಎಂದು ಘೋಷಣೆ ಕೂಗಿದರು. ಪ್ರತಿಭಟನೆಗೆ ಬಿಜೆಪಿ ನಾಯಕರು ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಮುಖಂಡರು ಬೆಂಬಲ ಸೂಚಿಸಿದರು. ಶಾಸಕರಾದ ಅರವಿಂದ ಬೆಲ್ಲದ, ಮಹೇಶ್ ಟೆಂಗಿನಕಾಯಿ, ಎಂಎಲ್‌ಸಿ ಪ್ರದೀಪ್ ಶೆಟ್ಟರ್, ಶ್ರೀರಾಮಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ರಸ್ತೆ ನಿರ್ಮಾಣದ ವಿಚಾರದಲ್ಲಿ ಪಾಲಿಕೆ ಆಯುಕ್ತರು ಹಾಗೂ ಪುರಾತತ್ವ ಇಲಾಖೆ ಅಧಿಕಾರಿಗಳ ವಿರುದ್ಧವೂ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಪುರಾತನ ದೇವಾಲಯ ಹಾಗೂ ಪುಷ್ಕರಣಿ ಜಾಗವನ್ನು ಸಂರಕ್ಷಿಸಬೇಕು. ಜಾಗವನ್ನು ವೈಜ್ಞಾನಿಕವಾಗಿ ಪರಿಶೀಲಿಸಿ, ಸಂಬಂಧಿಸಿದ ದಾಖಲೆಗಳನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು. ರಸ್ತೆ ತೆರವುಗೊಳಿಸುವವರೆಗೂ ಹೋರಾಟ ಮುಂದುವರಿಸುವುದಾಗಿ ಮುಖಂಡರು ಎಚ್ಚರಿಕೆ ನೀಡಿದರು.
ಇತ್ತ ಪುಷ್ಕರಣಿ ವಿವಾದದ ಹಿನ್ನೆಲೆಯಲ್ಲಿ ಹಳೇ ಹುಬ್ಬಳ್ಳಿಯಲ್ಲಿ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ. ಬಿಎನ್‌ಎಸ್‌ಎಸ್ 163ನೇ ವಿಧಿಯಡಿ ನಿಷೇಧಾಜ್ಞೆ ಜಾರಿಗೊಳಿಸಿ, ಆಸರ ಓಣಿ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ, ಕೆಎಸ್‌ಆರ್‌ಪಿ ತುಕಡಿಗಳು ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
ನಿಷೇಧಾಜ್ಞೆ ನಡುವೆಯೂ ನೂರಾರು ಪ್ರತಿಭಟನಾಕಾರರು ದೇವಸ್ಥಾನದತ್ತ ಮೆರವಣಿಗೆ ಹೊರಟರು. ಪೊಲೀಸರ ಬ್ಯಾರಿಕೇಡ್ ಭೇದಿಸಿ ಮುಂದೆ ಸಾಗಲು ಯತ್ನಿಸಿದ ಹಿನ್ನೆಲೆಯಲ್ಲಿ ಹಲವು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು. ಶಾಸಕರಾದ ಅರವಿಂದ ಬೆಲ್ಲದ, ಮಹೇಶ್ ಟೆಂಗಿನಕಾಯಿ ಹಾಗೂ ಪ್ರಮೋದ್ ಮುತಾಲಿಕ್ ಸೇರಿದಂತೆ ಹಲವು ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದರು.
ಮುಖಂಡರು ಹಾಗೂ ಕಾರ್ಯಕರ್ತರನ್ನು ವಶಕ್ಕೆ ಪಡೆದ ಪೊಲೀಸರ ಕ್ರಮಕ್ಕೆ ಸ್ಥಳೀಯರಿಂದಲೂ ಆಕ್ರೋಶ ವ್ಯಕ್ತವಾಯಿತು. ಮನೆಯ ಹೊರಗೆ ಬಂದ ಕೆಲ ಮಹಿಳೆಯರು ಪೊಲೀಸರ ಕ್ರಮವನ್ನು ಪ್ರಶ್ನಿಸಿ ಅಸಮಾಧಾನ ವ್ಯಕ್ತಪಡಿಸಿದರು.
ಒಟ್ಟಿನಲ್ಲಿ ಪುರಾತನ ಪುಷ್ಕರಣಿ ಜಾಗದಲ್ಲಿ ರಸ್ತೆ ನಿರ್ಮಾಣವಾಗಿದೆ ಎಂಬ ಆರೋಪದಿಂದ ಆರಂಭವಾದ ವಿವಾದ ಇದೀಗ ಪ್ರತಿಭಟನೆ, ಪೊಲೀಸ್ ವಶಕ್ಕೆ ಪಡೆಯುವಿಕೆ ಹಾಗೂ ರಾಜಕೀಯ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಒಂದೆಡೆ ರಸ್ತೆ ತೆರವುಗೊಳಿಸುವಂತೆ ಹಿಂದೂಪರ ಸಂಘಟನೆಗಳ ಪಟ್ಟು.. ಮತ್ತೊಂದೆಡೆ ಸೂಕ್ಷ್ಮ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ಸವಾಲು ಪೊಲೀಸರ ಮುಂದಿದೆ. ದಾಖಲೆಗಳು, ಕಂದಾಯ ನಕ್ಷೆ ಹಾಗೂ ಸಂಬಂಧಿಸಿದ ಇಲಾಖೆಗಳ ಪರಿಶೀಲನೆಯಿಂದ ವಿವಾದಕ್ಕೆ ಸ್ಪಷ್ಟತೆ ಸಿಗಬೇಕಿದೆ.
ಕ್ಯಾಮೆರಾ ಮ್ಯಾನ್ ಹೇಮಂತ್ ಜೊತೆಗೆ, ಸಂಗಮೇಶ್ ಸತ್ತಿಗೇರಿ, ಕರ್ನಾಟಕ ಟಿವಿ, ಹುಬ್ಬಳ್ಳಿ.
