ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ರೈತರಿಗೆ ಕರ್ನಾಟಕ ಹೈಕೋರ್ಟ್‌ನಿಂದ ದೊಡ್ಡ ರಿಲೀಫ್ ಸಿಕ್ಕಿದೆ. ಜಂಟಿ ಸರ್ವೆ ವಿರೋಧಿಸಿ ‘ಪೊರಕೆ ಚಳವಳಿ’ ನಡೆಸಿದ್ದ ಆರು ಮಂದಿ ರೈತರ ಮೇಲಿನ ಎಫ್‌ಐಆರ್ ಹಾಗೂ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅಷ್ಟೇ ಅಲ್ಲ, ಈ ಪ್ರಕರಣದಲ್ಲಿ ಕೋರ್ಟ್, ಪೊಲೀಸರು ಮತ್ತು ಸರ್ಕಾರದ ವಿರುದ್ಧ ಕೆಲವು ಅಚ್ಚರಿ ಪ್ರಶ್ನೆಗಳನ್ನೂ ಕೂಡ ಎತ್ತಿದೆ.
ಎಸ್ ‘ಕಳೆದ ಜುಲೈ 13 ರಂದು ಬಿಡದಿಯ ಮಂಡಲಹಳ್ಳಿ ಬಳಿ ಬಿಡದಿ ಟೌನ್‌ಶಿಪ್ ಯೋಜನೆಗಾಗಿ ಜಂಟಿ ಸರ್ವೆ ನಡೆಸಲು ಅಧಿಕಾರಿಗಳು ಬಂದಿದ್ರು. ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ರೈತರು ಪೊರಕೆ ಹಿಡಿದು ಪ್ರತಿಭಟನೆ ನಡೆಸಿದ್ದರು. ಈ ವೇಳೆ ನೂಕಾಟ-ತಳ್ಳಾಟ ನಡೆದು ಕಾರಿನ ಗ್ಲಾಸ್ ಜಖಂಗೊಂಡಿತ್ತು.
ಈ ಸಂಬಂಧ ರೈತರ ವಿರುದ್ಧ ಕೊಲೆ ಯತ್ನದಂತಹ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದನ್ನು ಪ್ರಶ್ನಿಸಿ ಜಯಮ್ಮ, ವರಲಕ್ಷ್ಮಮ್ಮ, ನಾಗರಾಜು ಸೇರಿದಂತೆ ಆರು ಜನ ರೈತರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲರು, ‘ರೈತರ ಇಚ್ಛೆಗೆ ವಿರುದ್ಧವಾಗಿ ಭೂಸ್ವಾಧೀನ ಮಾಡಲ್ಲ ಅಂತಾ ಸರ್ಕಾರವೇ ಹೇಳಿತ್ತು, ಆದ್ರೂ ಅಧಿಕಾರಿಗಳು ಬಲವಂತವಾಗಿ ಸರ್ವೆಗೆ ಮುಂದಾಗಿದ್ದಾರೆ. ಪ್ರತಿಭಟನೆಯಲ್ಲಿ ಪೊರಕೆ ಹಿಡಿಯುವುದು ಅಪರಾಧವಲ್ಲ’ ಅಂತಾ ವಾದ ಮಂಡಿಸಿದರು.
ಈ ಕೇಸ್‌ನಲ್ಲಿ ಎಲ್ಲರಿಗಿಂತ ಹೆಚ್ಚು ಅಚ್ಚರಿ ಮೂಡಿಸಿದ್ದು ಹೈಕೋರ್ಟ್‌ನ ಪ್ರತಿಕ್ರಿಯೆ! ಹೌದು ‘ಘಟನೆಯಲ್ಲಿ ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಅಧಿಕಾರಿಗಳು ದೂರು ನೀಡಿಲ್ಲ, ಬದಲಿಗೆ ಸ್ಥಳಕ್ಕೆ ಬಂದಿದ್ದ ಬಾಡಿಗೆ ಕಾರಿನ ಚಾಲಕನಿಂದ ದೂರು ದಾಖಲಿಸಲಾಗಿದೆ. ಇದನ್ನು ಗಮನಿಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ, ‘ಸರ್ಕಾರ ಕೂಡಾ ಸುಪಾರಿ ದೂರು ಕೊಡಲು ಶುರು ಮಾಡಿದೆಯಾ?’ ಅಂತಾ ತೀವ್ರ ಆಕ್ಷೇಪ ಹಾಗೂ ಅಚ್ಚರಿ ವ್ಯಕ್ತಪಡಿಸಿದೆ.
ಅಧಿಕಾರಿಗಳ ಬದಲಿಗೆ ಬಾಡಿಗೆ ಕಾರು ಚಾಲಕ ದೂರು ನೀಡಿರುವುದು ಸಂಪೂರ್ಣವಾಗಿ ಸಂಶಯಾಸ್ಪದವಾಗಿದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ರೈತರ ಮೇಲಿನ ತನಿಖೆಗೆ ಮಧ್ಯಂತರ ತಡೆ ನೀಡಿ ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿದೆ. ಹೈಕೋರ್ಟ್‌ನ ಈ ಆದೇಶದಿಂದಾಗಿ ತನಿಖೆಯ ಭೀತಿಯಲ್ಲಿದ್ದ ಬಿಡದಿ ಭಾಗದ ರೈತರಿಗೆ ದೊಡ್ಡ ಮಟ್ಟದ ನಿರಾಳತೆ ಸಿಕ್ಕಂತಾಗಿದೆ. ರೈತರ ಹೋರಾಟಕ್ಕೆ ಕಾನೂನು ಸಿಕ್ಕ ಜಯ ಅಂತಾ ಸ್ಥಳೀಯರು ಹರ್ಷ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ನಿಮ್ಮನಿಸಿಕೆಯನ್ನ ಕಾಮೆಂಟ್ ಮಾಡಿ ತಿಳಿಸಿ..
