ಬೇಕಾಬಿಟ್ಟಿ SIM ಇಟ್ಕೊಂಡಿದ್ದೀರಾ? ಇನ್ಮುಂದೆ ಕಷ್ಟ ಆಗುತ್ತೆ ಹುಷಾರ್;

ನೀವೂ ಕೂಡ ನಿಮ್ಮ ಹೆಸರಲ್ಲಿ ಒಂದಕ್ಕಿಂತ ಹೆಚ್ಚು ಸಿಮ್ ಕಾರ್ಡ್‌ಗಳನ್ನ ಇಟ್ಕೊಂಡಿದ್ದೀರಾ? ಹಾಗಾದ್ರೆ ಇದು ಖಂಡಿತ ನಿಮ್ಮ ಗಮನಕ್ಕೆ ಇರಲೇಬೇಕು. ಯಾಕಂದ್ರೆ, ಇನ್ಮುಂದೆ ಬೇಕಾಬಿಟ್ಟಿ ಸಿಮ್ ಕಾರ್ಡ್‌ಗಳನ್ನು ಪಡೆಯುವ ಕಾಲ ಮುಗೀತು! ಸೈಬರ್ ವಂಚನೆಗಳಿಗೆ ಕಡಿವಾಣ ಹಾಕೋಕೆ ಕೇಂದ್ರ ಸರ್ಕಾರ ಈಗ ಸಿಮ್ ಕಾರ್ಡ್ ಹೊಸ ರೂಲ್ಸ್ ಜಾರಿಗೆ ತಂದಿದೆ.

ಮೊದಲನೆಯದಾಗಿ, ಒಬ್ಬ ವ್ಯಕ್ತಿ ತನ್ನ ಹೆಸರಿನಲ್ಲಿ ಎಷ್ಟು ಸಿಮ್ ಕಾರ್ಡ್‌ಗಳನ್ನ ಹೊಂದಿರಬಹುದು ಅನ್ನೋದ್ರ ಬಗ್ಗೆ ಸ್ಪಷ್ಟ ನಿಯಮ ಇಲ್ಲಿದೆ ನೋಡಿ. ಸಾಮಾನ್ಯ ರಾಜ್ಯಗಳಲ್ಲಿದ್ದರೆ, ನೀವು ದೇಶದ ಎಲ್ಲಾ ಟೆಲಿಕಾಂ ಕಂಪನಿಗಳು ಸೇರಿ ಗರಿಷ್ಠ 9 ಸಿಮ್ ಕಾರ್ಡ್‌ಗಳನ್ನು ಮಾತ್ರ ಇಟ್ಟುಕೊಳ್ಳಲು ಅವಕಾಶವಿದೆ. ಅದೇ ಜಮ್ಮು ಮತ್ತು ಕಾಶ್ಮೀರ, ಅಸ್ಸಾಂ ಹಾಗೂ ಈಶಾನ್ಯ ರಾಜ್ಯಗಳಂತಹ ವಿಶೇಷ ಪ್ರದೇಶಗಳಲ್ಲಿದ್ದರೆ, ಭದ್ರತಾ ದೃಷ್ಟಿಯಿಂದ ಈ ಮಿತಿಯನ್ನು ಕೇವಲ 6 ಸಿಮ್ ಕಾರ್ಡ್‌ಗಳಿಗೆ ಸೀಮಿತಗೊಳಿಸಲಾಗಿದೆ.

ಒಂದು ವೇಳೆ ಈ ಮಿತಿಯನ್ನು ಮೀರಿ ನೀವು ಹೊಸ ಸಿಮ್ ಕಾರ್ಡ್ ಪಡೆಯಲು ಹೋದರೆ ಏನಾಗುತ್ತೆ ಗೊತ್ತಾ? ಆರಂಭಿಕ ಹಂತದಲ್ಲಿ ಟೆಲಿಕಾಂ ಕಂಪನಿಗಳು ‘ಪೋಸ್ಟ್-ಫ್ಯಾಕ್ಟೋ’ ಅಂದ್ರೆ ಸಿಮ್ ಕೊಟ್ಟ ಮೇಲಿನ ಪರಿಶೀಲನೆ ನಡೆಸುತ್ತವೆ. ನಿಮ್ಮ ಹೆಸರಲ್ಲಿ ಈಗಾಗಲೇ ಒಂಬತ್ತು ಸಿಮ್ ಇದ್ದು, ಮತ್ತೊಂದು ಹೊಸ ಸಿಮ್ ತೆಗೆದುಕೊಂಡರೆ, ಆ ಹೊಸ ಸಿಮ್ ಸಂಪರ್ಕವನ್ನು ತಕ್ಷಣವೇ ಅಮಾನತು ಮಾಡಲಾಗುತ್ತದೆ.

ಅಷ್ಟೇ ಅಲ್ಲ, ಇನ್ಮುಂದೆ ನೀವು ಹೊಸ ಸಿಮ್ ಪಡೆಯುವಾಗ ಅರ್ಜಿ ನಮೂನೆಯಲ್ಲಿ ನಿಮ್ಮ ಬಳಿ ಈಗಾಗಲೇ ಎಷ್ಟು ಸಿಮ್‌ಗಳಿವೆ ಅನ್ನೋದನ್ನ ಕಡ್ಡಾಯವಾಗಿ ಡಿಕ್ಲೇರ್ ಮಾಡ್ಲೇಬೇಕು. ಈ ಎಲ್ಲ ಕಳ್ಳಾಟಗಳಿಗೆ ಬ್ರೇಕ್ ಹಾಕಲು ದೂರಸಂಪರ್ಕ ಇಲಾಖೆ ಈಗ ‘ಡಿಜಿಟಲ್ ಇಂಟೆಲಿಜೆನ್ಸ್ ಪ್ಲಾಟ್‌ಫಾರ್ಮ್’ ಬಳಸ್ತಿದೆ.

ಇದರ ಮೂಲಕ ಟೆಲಿಕಾಂ ಕಂಪನಿಗಳು ಪ್ರತಿದಿನ ದತ್ತಾಂಶಗಳನ್ನು ಪರಿಶೀಲನೆ ಮಾಡ್ತಾರೆ. ಸದ್ಯಕ್ಕೆ ಸಿಮ್ ಕೊಟ್ಟ ಮೇಲೆ ತಪಾಸಣೆ ನಡೀತಿದೆಯಾದರೂ, 2026ರ ನವೆಂಬರ್ 30ರೊಳಗೆ ಸಿಮ್ ಕೊಡುವಾಗಲೇ ಆನ್-ದಿ-ಸ್ಪಾಟ್ ಪರಿಶೀಲನೆ ಮಾಡುವ ‘ರಿಯಲ್-ಟೈಮ್ ಸಿಸ್ಟಮ್’ ಕಡ್ಡಾಯವಾಗಲಿದೆ. ಅಂದ್ರೆ ಲಿಮಿಟ್ ಮೀರಿದ್ರೆ ಕೈಗೆ ಸಿಮ್ ಸಿಗೋ ಮಾತೇ ಇಲ್ಲ ಅಂತ ಹೇಳಬಹದು.

About The Author