ಕರ್ನಾಟಕದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆ ಪೂರ್ಣಗೊಂಡಿದ್ದು, ರಾಜ್ಯ ಚುನಾವಣಾ ಆಯೋಗ ಸೋಮವಾರ ಮೊದಲ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿಯಲ್ಲಿ SIR-2026ರ ಪ್ರಮುಖ ಮಾಹಿತಿಗಳನ್ನು ಬಿಡುಗಡೆ ಮಾಡಿದ್ದಾರೆ.
ಕರಡು ಪಟ್ಟಿಯಲ್ಲಿ 4.46 ಕೋಟಿ ಮತದಾರರು
SIR ಆರಂಭಕ್ಕೂ ಮುನ್ನ ಕರ್ನಾಟಕದಲ್ಲಿ ಒಟ್ಟು 5,54,32,314 ಮತದಾರರು ಇದ್ದರು. ಪರಿಷ್ಕರಣೆ ಬಳಿಕ ಕರಡು ಮತದಾರರ ಪಟ್ಟಿಯಲ್ಲಿ 4,46,80,151 ಮತದಾರರು ಉಳಿದಿದ್ದಾರೆ.
ಇವರ ಪೈಕಿ 2,22,01,727 ಪುರುಷರು, 2,24,75,553 ಮಹಿಳೆಯರು ಹಾಗೂ 2,871 ತೃತೀಯ ಲಿಂಗದ ಮತದಾರರು ಇದ್ದಾರೆ. ಒಟ್ಟು 4,46,35,975 ಮತದಾರರ ಮಾಹಿತಿಯನ್ನು ಡಿಜಿಟಲೀಕರಣಗೊಳಿಸಲಾಗಿದ್ದು, ಶೇ.80.52ರಷ್ಟು ಡಿಜಿಟಲೀಕರಣ ಪೂರ್ಣಗೊಂಡಿದೆ ಎಂದು ಆಯೋಗ ತಿಳಿಸಿದೆ.
1.07 ಕೋಟಿ ಮತದಾರರು ASDDO ಪಟ್ಟಿಗೆ
ಎನ್ಯುಮರೇಷನ್ ಫಾರ್ಮ್ ಸಲ್ಲಿಸದ 1,07,96,339 ಮತದಾರರನ್ನು ASDDO ಪಟ್ಟಿಗೆ ಸೇರಿಸಲಾಗಿದೆ. ಇವರಲ್ಲಿ 65,45,679 ಮಂದಿ ಶಾಶ್ವತವಾಗಿ ಸ್ಥಳಾಂತರಗೊಂಡವರು, 16,39,864 ಮಂದಿ ಮೃತಪಟ್ಟವರು, 15,17,042 ಮಂದಿ ಗೈರುಹಾಜರಾಗಿದ್ದವರು ಎಂದು ಗುರುತಿಸಲಾಗಿದೆ.
ಇನ್ನು 7,09,870 ಮಂದಿ ಒಂದಕ್ಕಿಂತ ಹೆಚ್ಚು ಕಡೆ ಮತದಾರರ ಪಟ್ಟಿಯಲ್ಲಿ ಹೆಸರು ಹೊಂದಿರುವ ಡ್ಯೂಪ್ಲಿಕೇಟ್ ಮತದಾರರು ಎಂದು ಗುರುತಿಸಲಾಗಿದ್ದು, 3,83,884 ಮಂದಿ ಇತರೆ ವಿಭಾಗಕ್ಕೆ ಸೇರಿದವರಾಗಿದ್ದಾರೆ.
ಸೆಪ್ಟೆಂಬರ್ 23ರವರೆಗೆ ಆಕ್ಷೇಪಣೆಗೆ ಅವಕಾಶ
ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರು ಅಥವಾ ಪಟ್ಟಿಯಲ್ಲಿರುವ ಮಾಹಿತಿಗೆ ಸಂಬಂಧಿಸಿದಂತೆ ಆಕ್ಷೇಪಣೆ ಹೊಂದಿರುವವರು ಆಗಸ್ಟ್ 24ರಿಂದ ಸೆಪ್ಟೆಂಬರ್ 23ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಬಹುದು.
ಮತದಾರರು ERO/AERO ಕಚೇರಿಗಳಲ್ಲಿ ಭೌತಿಕವಾಗಿ ಅರ್ಜಿ ಸಲ್ಲಿಸುವುದರ ಜೊತೆಗೆ Voters ECI ಪೋರ್ಟಲ್ ಹಾಗೂ ECINET ಮೊಬೈಲ್ ಆ್ಯಪ್ ಮೂಲಕವೂ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
14.67 ಲಕ್ಷ ಮಂದಿ ವಿವಿಧ ಫಾರ್ಮ್ ಪಡೆದಿದ್ದಾರೆ
ಜೂನ್ 6ರಿಂದ ಆಗಸ್ಟ್ 23ರವರೆಗೆ ಒಟ್ಟು 14,67,929 ಮಂದಿ ವಿವಿಧ ಅರ್ಜಿ ನಮೂನೆಗಳನ್ನು ಪಡೆದಿದ್ದಾರೆ. ಇದರಲ್ಲಿ ಫಾರ್ಮ್-6 ಅನ್ನು 4,73,354 ಮಂದಿ, ಫಾರ್ಮ್-6A ಅನ್ನು 3,880 ಮಂದಿ, ಫಾರ್ಮ್-7 ಅನ್ನು 67,307 ಮಂದಿ ಹಾಗೂ ಫಾರ್ಮ್-8 ಅನ್ನು 9,23,388 ಮಂದಿ ಪಡೆದಿದ್ದಾರೆ.
ಕರಡು ಪಟ್ಟಿಗೆ ಸಂಬಂಧಿಸಿದಂತೆ ಆಕ್ಷೇಪಣೆಗಳ ಪಟ್ಟಿಯನ್ನು CEO ಕರ್ನಾಟಕ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ಸಾರ್ವಜನಿಕರು ಅದನ್ನು ಪರಿಶೀಲಿಸಿ ಸಂಬಂಧಪಟ್ಟ ಚುನಾವಣಾಧಿಕಾರಿಗೆ ಆಕ್ಷೇಪಣೆ ಸಲ್ಲಿಸಬಹುದು.
ಆಕ್ಷೇಪಣೆಗಳ ಪರಿಶೀಲನೆ ಮತ್ತು ಅಗತ್ಯ ತಿದ್ದುಪಡಿಗಳ ಬಳಿಕ ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ತಿಳಿಸಿದ್ದಾರೆ. ಆಕ್ಷೇಪಣೆಗಳ ಮಾಹಿತಿಯನ್ನು ರಾಜಕೀಯ ಪಕ್ಷಗಳಿಗೂ ವಾರಕ್ಕೊಮ್ಮೆ ನೀಡಲಾಗುವುದು ಎಂದು ಅವರು ಹೇಳಿದ್ದಾರೆ.
