ಗಡ್ಕರಿ ರಾಜಕೀಯಕ್ಕೆ ನಿವೃತ್ತಿ? ಬಿಜೆಪಿಯಲ್ಲಿ ಸಂಚಲನ!

ಸಾರ್ವಜನಿಕ ಜೀವನ ಮತ್ತು ರಾಜಕೀಯ ಜವಾಬ್ದಾರಿಗಳಿಗೆ ಸಂಬಂಧಿಸಿದಂತೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ನೀಡಿರುವ ಅಚ್ಚರಿಯ ಹೇಳಿಕೆಯೊಂದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಹಾಗೂ ಸಂಚಲನಕ್ಕೆ ಕಾರಣವಾಗಿದೆ.

ನಾಗ್ಪುರದಲ್ಲಿ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮುಕ್ತವಾಗಿ ಮಾತನಾಡಿದ ನಿತಿನ್ ಗಡ್ಕರಿ, ‘ನಾನು ಮೊದಲಿನಂತೆ ಇನ್ನು ಮುಂದೆ ಹೆಚ್ಚು ಕೆಲಸ ಮಾಡಲು ಸಾಧ್ಯವಿಲ್ಲ. ಈಗ ಜವಾಬ್ದಾರಿಗಳನ್ನು ಹೊಸ ಪೀಳಿಗೆಗೆ ವಹಿಸಿಕೊಡುವ ಸಮಯ ಬಂದಿದೆ’ ಎಂದು ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸಂಪುಟ ಪುನಾರಚನೆಯಾಗಲಿದೆ ಎಂಬ ವದಂತಿಗಳು ವ್ಯಾಪಕವಾಗಿ ಹರಿದಾಡುತ್ತಿರುವ ನಿರ್ಣಾಯಕ ಘಟ್ಟದಲ್ಲೇ ಗಡ್ಕರಿ ಅವರಿಂದ ಈ ರೀತಿಯ ಹೇಳಿಕೆ ಹೊರಬಂದಿರುವುದು ರಾಷ್ಟ್ರೀಯ ರಾಜಕಾರಣದಲ್ಲಿ ಹತ್ತು ಹಲವು ಕುತೂಹಲಗಳನ್ನು ಹುಟ್ಟುಹಾಕಿದೆ.

ಕಳೆದ ಮೂರು ದಶಕಗಳಿಂದ ಸಾರ್ವಜನಿಕ ಜೀವನದಲ್ಲಿ ನಿರಂತರವಾಗಿ ತೊಡಗಿಸಿಕೊಂಡು ಅನೇಕ ಏಳು-ಬೀಳುಗಳನ್ನು ಹಾಗೂ ಪ್ರಶಸ್ತಿ-ಪುರಸ್ಕಾರಗಳನ್ನು ಕಂಡಿರುವುದಾಗಿ ಅವರು ತಮ್ಮ ಹಳೆಯ ದಿನಗಳನ್ನು ಮೆಲುಕು ಹಾಕಿದರು. ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ಕೆಲಸಗಳಲ್ಲಿ ತಮ್ಮ ಪಾಲ್ಗೊಳ್ಳುವಿಕೆ ತುಸು ಕಡಿಮೆಯಾಗಿದೆ ಎಂಬುದನ್ನು ಮುಕ್ತವಾಗಿ ಒಪ್ಪಿಕೊಂಡಿರುವ ಅವರು, ಹೊಸ ತಲೆಮಾರು ಮುಂದೆ ಬಂದಿದ್ದು, ಹಳೆಯ ತಲೆಮಾರಿನ ಹಿರಿಯರು ಅವರಿಗೆ ಕೇವಲ ಮಾರ್ಗದರ್ಶನ ನೀಡಬೇಕು ವಿನಃ ಎಲ್ಲವನ್ನೂ ತಾವೇ ಹಿಡಿದು ಕೂರಬಾರದು ಎಂದು ಪ್ರತಿಪಾದಿಸಿದ್ದಾರೆ.

ಬಿಜೆಪಿಯ ರಾಷ್ಟ್ರೀಯ ಮಟ್ಟದ ಸಂಘಟನಾತ್ಮಕ ಬದಲಾವಣೆಗಳ ಬೆನ್ನಲ್ಲೇ ಈ ಹೇಳಿಕೆ ಹೊರಬಿದ್ದಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಮುಂಬರುವ ದಿನಗಳಲ್ಲಿ ಮಹಾರಾಷ್ಟ್ರದ ಬುಡಕಟ್ಟು ಹಳ್ಳಿಗಳ ಅಭಿವೃದ್ಧಿ ಹಾಗೂ ವಿದ್ಯುದ್ದೀಕರಣದ ಗುರಿಯನ್ನು ಹೊಸ ಪೀಳಿಗೆಯ ನಾಯಕರು ಯಶಸ್ವಿಯಾಗಿ ಮುನ್ನಡೆಸಿಕೊಂಡು ಹೋಗಲಿದ್ದಾರೆ ಎಂಬ ವಿಶ್ವಾಸವನ್ನು ಗಡ್ಕರಿ ವ್ಯಕ್ತಪಡಿಸಿದ್ದಾರೆ.

About The Author